ಮನಸ್ಸಿಗೆ ಬೇಕು ಶಿಸ್ತು
ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಮೂಲಕವೇ ಸಾಧನೆಯ ಹಾದಿಯಲ್ಲಿ ಸಾಗುವುದು ಸಾಧ್ಯ ಎನ್ನುವ ಮಾತಿನಲ್ಲಿ ಸಂದೇಹವೇ ಇಲ್ಲ. ಮನಸ್ಸಿನ ಸ್ಥಿರತೆಯಿಂದಲೇ ಕಾರ್ಯಸಾಧನೆ ಸುಲಭ. ಆದರೆ ಸ್ಥಿರ ಬುದ್ಧಿಯನ್ನು ಹೊಂದಲು ಮನಸ್ಸನ್ನು ನಿರಂತರ ಶಿಸ್ತಿಗೆ ಒಳಪಡಿಸುವುದು ಮುಖ್ಯ. ದೇಹವನ್ನು ಸ್ವಸ್ಥ, ಸುಂದರ, ಸುದೃಢವಾಗಿರಿಸಲು ನಿತ್ಯ ವ್ಯಾಯಾಮ ಎಷ್ಟು ಅವಶ್ಯವೋ ಮನಸ್ಸಿನ ಸ್ವಾಸ್ಥ್ಯ, ಸ್ಥಿರತೆಗೂ ಆ ಶಿಸ್ತು ಅಷ್ಟೆ ಅಗತ್ಯ. ಕುರುಕ್ಷೇತ್ರದಲ್ಲಿ ನಿಂತ ಅರ್ಜುನನಿಗೆ ತನ್ನ ಗುರು – ಹಿರಿಯರನ್ನು, ಬಂಧು – ಮಿತ್ರರನ್ನು ಕಂಡಾಗ ಅವರ ವಿರುದ್ಧ ತಾನು ಹೇಗೆ ಯುದ್ಧಮಾಡಲಿ? ಅವರನ್ನು ಹತ್ಯೆಗೈದು ತಾನೇಕೆ ಆ ಪಾಪವನ್ನು ಕಟ್ಟಿಕೊಳ್ಳಲಿ? ಎಂಬ ದ್ವಂದ್ವ ಕಾಡಿದಾಗ ಕೃಷ್ಣನು ಆತನಿಗೆ ಕ್ಷತ್ರಿಯ ಧರ್ಮಪಾಲನೆಯ ಕರ್ತವ್ಯವನ್ನು ನೆನಪಿಸಿಕೊಟ್ಟು ಆತನ ಮನಸ್ಸಿನೊಳಗಿನ ಆಸ್ಥಿರತೆಯನ್ನು ಹೋಗಲಾಡಿಸುತ್ತಾನೆ. ಆದರೂ ಅರ್ಜುನನಿಗೆ ಸ್ಥಿರ ಬುದ್ಧಿಯನ್ನು ಹೊಂದಿರುವ ಮನುಜನ ಲಕ್ಷಣಗಳನ್ನು ತಿಳಿಯುವ ಕುತೂಹಲ ತಣಿಯುವುದಿಲ್ಲ. ಅದಕ್ಕೆ ಕೃಷ್ಣನ ಉತ್ತರ ಕೂಡ ಅಷ್ಟೆ ಸ್ಪಷ್ಟ. ಯಾರು ಮನಸ್ಸಿನಲ್ಲಿರುವ ಆಸೆ – ಆಕಾಂಕ್ಷೆಗಳನ್ನು ತ್ಯಜಿಸಿ ಆತ್ಮನಿಂದಲೇ ಆತ್ಮನಲ್ಲಿ ಸಂತುಷ್ಟಿಯನ್ನು ಪಡೆಯುವರೋ ಅವರು ಮಾತ್ರವೇ ಸ್ಥಿರಬುದ್ಧಿಯನ್ನು ಹೊಂದಿರುತ್ತಾರೆ. ಮನದೊಳಗಿನ ಅಸೆ–ಆಕಾಂಕ್ಷೆಗಳನ್ನು ತ್ಯಜಿಸಿದವರಿಗೆ ಮಾತ್ರವೇ ದುಃಖ ಉಂಟಾದಾಗ ಮನಸ್ಸು ಉದ್ವೇಗಗೊಳ್ಳುವುದಿಲ್ಲ. ಸುಖ ಉಂಟಾದಾಗ ಅದರಲ್ಲಿ ಅಭಿಲಾಷೆಯೂ ಮಾಡುವುದಿಲ್ಲ!.