Home » ಬಾಳ ಪಯಣದ ವಾಹನ
 

ಬಾಳ ಪಯಣದ ವಾಹನ

by Kundapur Xpress
Spread the love

ಬದುಕೆಂಬ ಪಯಣವನ್ನು ಯಶಸ್ವಿಯಾಗಿ ಮತ್ತು ನಿರ್ವಿಘ್ನವಾಗಿ ಕೈಗೊಳ್ಳಲು ದೇಹವೆಂಬ ಮೋಟಾರು ವಾಹನ ನಮಗೆ ಅತೀ ಅಗತ್ಯ. ಈ ವಾಹನವನ್ನು ನಾವು ಸುಸ್ಥಿತಿಯಲ್ಲಿಡದಿದ್ದರೆ ನಮ್ಮ ಬಾಳ ಪಯಣ ಸಾಗುವುದಿಲ್ಲ. ಇಷ್ಟಕ್ಕೂ ದೇಹವನ್ನು ಆರೋಗ್ಯಕರವಾಗಿ, ಸುಸ್ಥಿತಿಯಲ್ಲಿ ನಾವು ಏಕೆ ಇಡಬೇಕು? ‘ಪರೋಪಕಾರಾರ್ಥಂ ಇದಂ ಶರೀರಂ’ ಎಂಬ ಮಾತಿನಂತೆ ಪರರ ಸೇವೆಗಾಗಿಯೇ ಈ ದೇಹವು ಮೀಸಲು ಎಂಬ ಸತ್ಯವನ್ನು ನಾವು ಅರಿಯಬೇಕು. ಅಷ್ಟಾದಶ ಪುರಾಣಗಳು ಸಾರುವ ಸಂದೇಶ ಕೂಡ ಇದೇ ಆಗಿದೆ. ಸ್ವಾಮಿ ವಿವೇಕಾನಂದರು ಒಂದೆಡೆ ಹೇಳುತ್ತಾರೆ: ಪರರ ಸೇವೆಗಾಗಿ ಸರ್ವಸ್ವವನ್ನೂ ತೊರೆಯುವವನು ಮಾತ್ರವೇ ಮುಕ್ತಿಗೆ ಅರ್ಹ. ಕಲಿಯುಗದಲ್ಲಿ ಮುಕ್ತಿಯನ್ನು ಪಡೆಯಲು ಸರ್ವಸ್ವವನ್ನು ಕೂಡ ತೊರೆಯಬೇಕಿಲ್ಲ; ಕೂಡಿಟ್ಟ ಸಂಪತ್ತಿನ ಸ್ವಲ್ಪವೇ ಸ್ವಲ್ಪ ಭಾಗವನ್ನು ದಾನ ಮಾಡಿದರೂ ಸಾಕು. ಆದರೆ ಅಷ್ಟನ್ನು ಕೂಡ ಮಾಡಲು ನಮ್ಮೊಳಗಿನ ಅತೀವ ಸ್ವಾರ್ಥಪರತೆ ನಮ್ಮನ್ನು ಬಿಡುವುದಿಲ್ಲ. ಈ ಸ್ವಾರ್ಥವೆಂಬ ವಿಷದ ಮೂಲ ಬೀಜವು ಎಲ್ಲಿ ಅಡಗಿದೆ? ದೇಹಭಿಮಾನದ ಆಳದಲ್ಲಿ ಅಡಗಿದೆ. ಸೌಂದರ್ಯದ ಹೆಸರಲ್ಲಿ ನಾವು ದೇಹವನ್ನು ಅಹಂಕಾರದಿಂದ ಆರಾಧಿಸುವಷ್ಟು ಮೂಢರಾಗಿರುವೆವು. ‘ಬ್ಯೂಟಿ ಈಸ್ ಓನ್ಲೀ ಸ್ಕಿನ್ ಡೀಪ್’ ಎಂಬ ಎಚ್ಚರಿಕೆ ಇಂಗ್ಲೀಷಿನಲ್ಲೂ ಇದೆ! ಆದರೂ ನಮ್ಮ ದೇಹವನ್ನು ನಾವು ಅದೆಷ್ಟು ಪ್ರೀತಿಸುವೆವು ಎಂದರೆ ಒಂದು ದಿನ ಈ ದೇಹಕ್ಕೆ ಸಾವು ನಿಶ್ಚಿತ ಎಂಬುದನ್ನು ಅರಿತರೂ ಅದನ್ನು ಮರೆತು ದೇಹಪ್ರಜ್ಞೆಯಲ್ಲೇ ಬದುಕುತ್ತಿರುವೆವು. ಹಾಗಾಗಿ ದೇವರನ್ನು ನೆನೆಯಲು ಕಣ್ಣುಮುಚ್ಚಿ ಧ್ಯಾನಕ್ಕೆ ಕುಳಿತರೆ ದೇಹವೆಂಬ ಕೋಟೆಯ ಭದ್ರ ದ್ವಾರಗಳನ್ನು ದಾಟಿಹೋಗಲು ಸೋಲುವೆವು. ಗಾಳಿಯಲ್ಲಿ ಲೀನವಾಗುವ ಸಚ್ಛಿದಾನಂದ ಅನುಭವದಿಂದ ವಂಚಿತರಾಗುವೆವು. ದೇಹದ ಜಡತ್ವದಿಂದಾಗಿ ಜಂಗಮರಾಗಲು ವಿಫಲರಾಗುವೆವು!

   

Related Articles

error: Content is protected !!