ಕಷ್ಟ-ಸುಖಗಳು ಬದುಕಿನಲ್ಲಿ ರಾತ್ರಿ ಹಗಲಿನಂತೆ ಬರುತ್ತಲೇ ಇರುತ್ತವೆ. ಬಂದ ಬಳಿಕ ಸ್ವಲ್ಪಕಾಲ ಇದ್ದು ಮತ್ತೆ ಮರೆಯಾಗುತ್ತವೆ. ಕಷ್ಟಗಳು ನಿವಾರಣೆಗೊಂಡಾಗ ಮನಸ್ಸು ನಿರಾಳವಾಗುತ್ತದೆ. ಆದರೆ ಸುಖ ಮರೆಯಾದಾಗ ಮನಸ್ಸು ಖಿನ್ನವಾಗುತ್ತದೆ. ಉದ್ವಿಗ್ನಗೊಳ್ಳುತ್ತದೆ. ಸೂಕ್ಷ್ಮವಾಗಿ ಗಮನಿಸಿದರೆ ಕಷ್ಟ-ಸುಖಗಳನ್ನು ಅನುಭವಿಸುವಾಗಿನ ಮನೋಸ್ಥಿತಿ ಸಹಜವಾದ ಸ್ಥಿತಿ ಅಲ್ಲ ಎನ್ನುವುದು ವೇದ್ಯವಾಗುತ್ತದೆ. ಅವೆರಡೂ ಸಹಜತೆಯಿಂದ ದೂರವಾದ, ಭಾವಾವೇಶದಿಂದ ಕೂಡಿರುವ ಸ್ಥಿತಿಗಳು. ಸಮತ್ವವನ್ನು ಕಳೆದುಕೊಂಡ ಸ್ಥಿತಿ ಅದು. ಆದರೆ ಕಷ್ಟ-ಸುಖದ ಎರಡೂ ವಿಷಮ ಸ್ಥಿತಿಗಳಲ್ಲಿ ನಾವು ಬದುಕಿನ ಇತಿಮಿತಿಗಳನ್ನು ಅನುಭವದಿಂದ ಕಲಿಯುತ್ತೇವೆ. ನಮ್ಮ ರಾಗ-ದ್ವೇಷಗಳನ್ನು ನಾವು ಸನಿಹದಿಂದ ಕಾಣುತ್ತೇವೆ. ನಾವು ತೀವ್ರವಾಗಿ ಪ್ರೀತಿಸುವ ಬದುಕಿನ ನಶ್ವರತೆಯ ಅರಿವು ಕೂಡ ಉಂಟಾಗುತ್ತದೆ. ಆಧ್ಯಾತ್ಮಿಕ ಪಥದಲ್ಲಿ ನಮ್ಮನ್ನು ಮುನ್ನಡೆಸುವ ಈ ಅರಿವು ಸುಖ-ದುಃಖ ಮುಂತಾಗಿ ಬದುಕಿನಲ್ಲಿ ಯಾವುದೂ ಶಾಶ್ವತ ಸ್ಥಿತಿ ಅಲ್ಲ ಎನ್ನುವ ಸತ್ಯವನ್ನು ತಿಳಿಸುತ್ತದೆ. ಬದುಕಿನಲ್ಲಿ ಸುಖವನ್ನು ಅಪೇಕ್ಷಿಸುವವರು ದುಃಖವನ್ನು ಕೂಡ ಸ್ವೀಕರಿಸಲು ಸಿದ್ಧರಿರುವುದು ಅಗತ್ಯ. ಏಕೆಂದರೆ ಅವು ಒಂದನ್ನು ಬಿಟ್ಟು ಒಂದಿಲ್ಲ. ಪುಣ್ಯವನ್ನು ಗಳಿಸಬೇಕು ಎಂದು ಬಯಸುವಲ್ಲಿ ಸದಾಕಾಲ ಸುಖವನ್ನೇ ಅನುಭವಿಸಬೇಕೆಂಬ ವಾಂಛೆ ಇದ್ದೇ ಇರುವುದು. ಆ ವಾಂಛೆಯು ಸ್ವಾರ್ಥಪರತೆಯನ್ನು ಹೆಚ್ಚಿಸುವುದರಿಂದ ಪುಣ್ಯದ ಜತೆಗೆ ಒಂದಿಷ್ಟು ಪಾಪದ ಅಂಶವನ್ನೂ ತುಂಬಿಕೊಡುವುದು. ಪುಣ್ಯ ಸಂಪಾದನೆಗಾಗಿ ಕೈಗೊಳ್ಳುವ ಕರ್ಮಗಳು ದೇವರ ಪ್ರೀತ್ಯರ್ಥವಾಗಿರುವ ಬದಲು ಪುಣ್ಯದ ಠೇವಣಿಯನ್ನು ಹೆಚ್ಚಿಸಬೇಕೆಂಬ ಒಂದೇ ಉದ್ದೇಶವನ್ನು ಹೊಂದಿರುತ್ತವೆ. ಸುಖ-ದುಃಖ, ಪಾಪ ಪುಣ್ಯದ ಬೆನ್ನು ಹತ್ತದೆ ದೇವರ ಪ್ರೀತ್ಯರ್ಥವಾಗಿ ಸಮರ್ಪಣಾ ಭಾವದಿಂದ ನಿಷ್ಕಾಮ ಕರ್ಮಯೋಗಿಯಾಗುವುದರಲ್ಲೇ ಮೋಕ್ಷ ಪ್ರಾಪ್ತಿ ಸಾಧ್ಯ ಎಂದು ಶ್ರೀಕೃಷ್ಣನು ಗೀತೆಯಲ್ಲಿ ಹೇಳಿರುವ ಮಾತು ಮನನೀಯವಾಗಿದೆ