ದೇವರ ಮೇಲೆ ನಮಗೆ ಪೂರ್ಣ ವಿಶ್ವಾಸ ಬರಬೇಕಾದರೆ ನಮ್ಮನ್ನು ನಾವು ಸಂಪೂರ್ಣವಾಗಿ ದೇವರಿಗೆ ಸಮರ್ಪಿಸಿಕೊಳ್ಳಬೇಕು. ನಮ್ಮಲ್ಲಿ ನಮಗೆ ವಿಶ್ವಾಸವು ಮೂಡಿದಾಗ ಆತ್ಮಬಲವು ದ್ವಿಗುಣಗೊಳ್ಳುತ್ತದೆ. ಅದರಿಂದ ನಮ್ಮ ಬುದ್ಧಿ, ಮನಸ್ಸು ಹಾಗೂ ದೇಹದಲ್ಲಿ ದಿವ್ಯವಾದ ಚೇತನ ಪ್ರವಹಿಸುತ್ತದೆ. ಪರಿಣಾಮವಾಗಿ ಎಲ್ಲರಲ್ಲೂ ಎಲ್ಲದರಲ್ಲೂ ದೇವರನ್ನು ಕಾಣಲು ನಮಗೆ ಸಾಧ್ಯವಾಗುತ್ತದೆ. ಭಗವಂತನಲ್ಲೇ ನಮ್ಮ ಮನಸ್ಸನ್ನು ಕೇಂದ್ರೀಕರಿಸಲು ಸಾಧ್ಯವಾಗುತ್ತದೆ. ಆ ಮೂಲಕ ಮನಸ್ಸಿನ ಸಮತ್ವವು ಏರ್ಪಡುತ್ತದೆ. ಗೀತೆಯಲ್ಲಿ ಶ್ರೀಕೃಷ್ಣ ಹೇಳುತ್ತಾನೆ: ‘ಬಾಹ್ಯ ವಿಷಯಗಳಲ್ಲಿ ಅರ್ಥಾತ್ ಸಾಂಸಾರಿಕ ಸುಖ-ಭೋಗಗಳಲ್ಲಿ ಆಸಕ್ತಿಯಿಲ್ಲದ, ಅಂತಃಕರಣವುಳ್ಳ ಸಾಧಕರು ಭಗವಂತನ ಧ್ಯಾನದಲ್ಲಿ ದಿವ್ಯವಾದ ಆನಂದವನ್ನು ಪಡೆಯುತ್ತಾರೆ. ಇಂದ್ರಿಯ, ಮನಸ್ಸು, ಬುದ್ದಿ ಇವುಗಳನ್ನು ಜಯಿಸಿರುವವರೇ ಮೋಕ್ಷಕ್ಕೆ ಅರ್ಹರಾಗುತ್ತಾರೆ. ಯಾರಲ್ಲಿ ಭಯ ಮತ್ತು ಕ್ರೋಧಗಳಿರುವುದಿಲ್ಲವೋ ಅವರೇ ಬಂಧಮುಕ್ತರಾಗಿರುತ್ತಾರೆ. ಆದುದರಿಂದ ಇಂದ್ರಿಯಗಳ ಮೇಲೆ ಹತೋಟಿಯನ್ನು ಹೊಂದಲು, ಮನಸ್ಸು ಹಾಗೂ ಬುದ್ಧಿಯನ್ನು ಅಂಕಿತದಲ್ಲಿಡಲು ಮತ್ತು ಆ ಮೂಲಕ ಭಯ, ಕ್ರೋಧಗಳನ್ನು ಗೆಲ್ಲಲು ನಮಗೆ ಆತ್ಮಶಕ್ತಿಯೇ ಅಗತ್ಯ. ಆ ಶಕ್ತಿಯ ಬಲದಲ್ಲಿ ನಾವು ಬಾಹ್ಯ ಶಕ್ತಿಗಳ ಆಕರ್ಷಣೆಯಿಂದ ಪಾರಾಗಬಹುದು. ಆತ್ಮವಿಶ್ವಾಸದ ಫಲವಾಗಿ ಮೈಮನಸ್ಸಿನಲ್ಲಿ ತುಂಬಿಕೊಳ್ಳುವ ಆತ್ಮಶಕ್ತಿಯಿಂದ ಬದುಕಿನ ಸಮರವನ್ನು ನಾವು ನಿರಾಯಾಸವಾಗಿ, ಋಜು ಮಾರ್ಗದಿಂದಲೇ ಗೆಲ್ಲಬಹುದು. ಲೋಕೋಕ್ತಿಯೊಂದು ಹೇಳುತ್ತದೆ: ಆತ್ಮವಿಶ್ವಾಸದಲ್ಲಿ ಪ್ರಕಟಗೊಳ್ಳುವ ಉತ್ಸಾಹ, ಉಲ್ಲಾಸಗಳು ಬಾಳಿಗೆ ಮೆರುಗು ನೀಡುವ ದಿವ್ಯ ಶಕ್ತಿ, ನಿರಾಸೆ, ನಿರುತ್ಸಾಹಗಳನ್ನು ಬಾಳಿನಲ್ಲಿ ತುಂಬಿಕೊಂಡ ಮನುಷ್ಯನಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ! ಅದಕ್ಕೆಂದೇ ವಿವೇಕವಾಣಿ ಹೇಳುತ್ತದೆ: ನಿಮ್ಮಲ್ಲಿ ಸಾಸಿವೆ ಕಾಳಿನಷ್ಟು ಆತ್ಮವಿಶ್ವಾಸವಿದ್ದರೆ ಸಾಕು- ಯಾವ ಕಾರ್ಯವೂ ಅಸಂಭವವಲ್ಲ!