Home » ಬದುಕಿನ ಪರಮಸತ್ಯ
 

ಬದುಕಿನ ಪರಮಸತ್ಯ

by Kundapur Xpress
Spread the love

43.ಬದುಕಿನ ಪರಮಸತ್ಯ

ಬದುಕಿನ ಸಮಸ್ತ ಭಯಕ್ಕೆ ಮೂಲ ಯಾವುದು? ಬದುಕಿನ ವ್ಯಾಮೋಹವನ್ನು ಬೆಳೆಸಿಕೊಂಡವರಿಗೆ ಸಾವಿಗಿಂತ ಭಯಾನಕವಾದದ್ದು ಬೇರೊಂದಿಲ್ಲ. ಅಂತೆಯೇ ನಮ್ಮೆಲ್ಲ ಭಯಗಳಿಗೆ ಸಾವೇ ಮೂಲ. ಆದರೆ ನಿಶ್ಚಿತ. ಹುಟ್ಟು ಮತ್ತು ಸಾವು ಬದುಕೆಂಬ ನಾಣ್ಯದ ಎರಡು ಮುಖಗಳು. ಆದರೂ ಬದುಕಿನ ಅತ್ಯಂತ ಕಠೋರವಾದ ಸತ್ಯವೆಂದರೆ ಸಾವು ಮಾತ್ರ. ಗೀತೆಯಲ್ಲಿ ಕೃಷ್ಣ ಅರ್ಜುನನಿಗೆ ಹೇಳುವುದು ಇದನ್ನೇ: ಹುಟ್ಟಿದವರಿಗೆಲ್ಲ ಸಾವು ನಿಶ್ಚಿತ. ಇದು ಪ್ರಕೃತಿಯ ನಿಯಮ. ಮೂಲಭೂತ ಸತ್ಯವನ್ನು ತಿಳಿಯದಿದ್ದರೂ ಸಾವನ್ನು ಮರೆತು ಜೀವಿಸುವ ಮನುಷ್ಯನ ಸ್ವಭಾವ ಮಾತ್ರ ಅತ್ಯಂತ ಆಶ್ಚರ್ಯಕರ. ಪ್ರಪಂಚದ ಅತ್ಯಂತ ವಿಸ್ಮಯಕರ ಸಂಗತಿ ಯಾವುದು ಎಂಬ ಯಕ್ಷಪ್ರಶ್ನೆಗೆ ಧರ್ಮರಾಯ ಕೊಟ್ಟ ಉತ್ತರ ಕೂಡ ಅದುವೇ ಆಗಿದೆ. ಸಾವಿನ ನಿಶ್ಚಿತತೆಯನ್ನು ನಿರ್ಲಕ್ಷಿಸಿ ಬದುಕಿನ ಮೋಹದಲ್ಲೇ ವಿಜೃಂಭಿಸುವ ಮನುಷ್ಯನ ಸ್ವಭಾವಕ್ಕೆ ಮೀರಿದ ವಿಸ್ಮಯಕರ ಸಂಗತಿ ಜಗತ್ತಿನಲ್ಲಿ ಬೇರೊಂದಿಲ್ಲ. ಸಾವು ಎಷ್ಟೇ ಸನಿಹದಲ್ಲಿ ಸುಳಿದರೂ ಅದು ತನಗೆ ಸಂಬಂಧಪಟ್ಟದ್ದೇ ಅಲ್ಲ ಎಂಬ ದಿವ್ಯ ನಿರ್ಲಕ್ಷ್ಯದಲ್ಲಿ ಬದುಕುವ ಮನುಷ್ಯನ ವಿಸ್ಮಯಕರ ಪ್ರವೃತ್ತಿಗೆ ಮೂಲ ಕಾರಣವಾದರೂ ಏನು? ಕೇವಲ ಬದುಕನ್ನು ಪ್ರೀತಿಸುವ ವಾಂಛೆಯೇ? ಅಲ್ಲ, ಆದರೆ ಅದಕ್ಕೂ ಮೀರಿದ ಸ್ವಾರ್ಥ, ಲೋಭ, ಮೋಹ, ಮದ, ಮತ್ಸರಗಳೇ ಕಾರಣ. ಇದರಿಂದಾಗಿಯೇ ಬದುಕಿನ ಕುರಿತ ಮಮಕಾರ, ಅಹಂಕಾರಕ್ಕೆ ಮಿತಿಯೇ ಇಲ್ಲ. ಇದನ್ನು ನಿರ್ಮೂಲನೆ ಮಾಡದೆ ಮನಸ್ಸಿನಲ್ಲಿ ಶಾಂತಿ, ನೆಮ್ಮದಿ ನೆಲೆಸುವುದಾದರೂ ಹೇಗೆ? ಸಾವೆಂಬ ಪರಮ ಸತ್ಯದ ಅರಿವಿನ ಮೂಲಕ ಬದುಕಿನಲ್ಲಿ ತುಂಬಿರುವ ಅಹಂಕಾರಮಮಕಾರಗಳನ್ನು ಗೆಲ್ಲಲು ಸಾಧ್ಯವಾದೀತು.

   

Related Articles

error: Content is protected !!