- ಆತ್ಮಜ್ಞಾನದ ಬೆಳಕು
ದೈನಂದಿನ ವ್ಯಾವಹಾರಿಕ ಬದುಕಿನಲ್ಲಿ ನಮಗೆ ಲಾಭ – ನಷ್ಟಗಳು ಎಷ್ಟು ಮುಖ್ಯವೋ ಅದೇ ದೃಷ್ಟಿಕೋನದಿಂದ ಪಾಪ – ಪುಣ್ಯಗಳೂ ಮುಖ್ಯವಾಗಿವೆ. ಆದರೆ ಸಾಮಾನ್ಯವಾಗಿ ನಾವೆಸಗುವ ಪಾಪಗಳ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಪುಣ್ಯ ಸಂಪಾದನೆಗಾಗಿ ಮಾತ್ರ ಏನೇನನೆಲ್ಲ ಮಾಡುತ್ತೇವೆ. ಇದು ಮನುಷ್ಯ ಸಹಜ ಗುಣ. ಸಾಮಾನ್ಯವಾಗಿ ನಮಗೆ ನಮ್ಮ ತಪ್ಪುಗಳು ಸ್ಪಷ್ಟವಾಗಿ ಗೋಚರವಾಗುತ್ತವೆ. ಬದುಕಿನುದ್ದಕ್ಕೂ ನಮ್ಮನ್ನು ನಾವು ಅರಿತು ಕೊಳ್ಳುವುದಿಲ್ಲ. ನಮಗೆ ನಾವೇ ಒಗಟಾಗುತ್ತೇವೆ. ಇತರರಿಗೂ ನಮಗೂ ನಾವು ಸಮಸ್ಯಾತ್ಮಕ ವ್ಯಕ್ತಿಗಳಾಗುತ್ತೇವೆ. ಬದುಕಿನ ನಿಜವಾದ ಆನಂದ, ಸುಖ, ಸಂತೋಷ ನಮ್ಮನ್ನು ನಾವು ಅರಿತುಕೊಳ್ಳುವುದರಲ್ಲೇ ಇದೆ. ನಮ್ಮಲ್ಲಿ ನಾವು ವಿಶ್ವಾಸ ಹೊಂದುವುದರಲ್ಲೇ ಇದೆ ಎನ್ನುವುದನ್ನು ನಾವು ಮನಗಾಣಬೇಕು. ನಮ್ಮನ್ನು ನಾವು ಅರಿಯುವುದು ಮತ್ತು ನಮ್ಮಲ್ಲಿ ನಾವು ವಿಶ್ವಾಸವನ್ನು ಹೊಂದುವುದು ಎಂದರೆ ನಮ್ಮ ಹೃದಯ ದೇಗುಲದಲ್ಲಿ ನೆಲೆಸಿರುವ ಜೀವಾತ್ಮನ ಅಸ್ತಿತ್ತ್ವವನ್ನು ಗುರುತಿಸುವುದೇ ಆಗಿದೆ. ಹಾಗೆ ಗುರುತಿಸುವ ಮೂಲಕವೇ ನಾವು ಆಸ್ತಕರಾಗುತ್ತೇವೆ. ನಿಜವಾದ ಅರ್ಥದಲ್ಲಿ ಮುನಿಗಳೆನಿಸಿಕೊಳ್ಳುತ್ತೇವೆ. ನಿಜಕ್ಕಾದರೆ ಭಗವಂತನ ಸಾಕ್ಷತ್ಕಾರ ಪಡೆದ ಯೋಗಿಗಳ ಲಕ್ಷಣವೇನು? ಸ್ವಾರ್ಥಪರವಾದ ಪ್ರಾಪಂಚಿಕರ ಬದುಕಿನ ವ್ಯವಹಾರಗಳೆಲ್ಲವೂ ಆ ಯೋಗಿಗಳಿಗೆ ಅರ್ಥಹೀನವಾಗಿರುವುದರಿಂದ ಪ್ರಾಪಾಂಚಿಕರ ಪಾಲಿನ ಹಗಲು ಅವರ ಪಾಲಿಗೆ ಕತ್ತಲು. ಪ್ರಾಪಂಚಿಕ ವ್ಯವಹಾರಗಳನ್ನು ಮುಗಿಸಿದ ಬಳಿಕ ನಾವು ಪ್ರವೇಶಿಸುವ ನಿದ್ರಾಲೋಕದ ಕತ್ತಲು, ಯೋಗಿಗಳ ಪಾಲಿನ ‘ಹಗಲು’. ಗೀತೋಪದೇಶದಲ್ಲಿ ಕೃಷ್ಣನು ಅರ್ಜುನನಿಗೆ ಕಾಣಿಸುವ ‘ಹಗಲು’ ಕೂಡ ಇದೇ ಆಗಿದೆ. ಭಗವಂತನ ಸಾಕ್ಷಾತ್ಕಾರ ಪಡೆದ ಯೋಗಿಗಳು ಕಾಣುವ ಹಗಲು ಆತ್ಮಜ್ಞಾನದ ಪ್ರಖರತೆಯಲ್ಲಿ ಬೆಳಗುವ ಹಗಲು.