- ದುರಭಿಮಾನದ ರುಜೆ
ಬದುಕು ನಶ್ವರವೆಂಬ ಸತ್ಯದ ಅರಿವನ್ನು ನಾವು ರೂಢಿಸಿಕೊಳ್ಳುವುದು ಅಗತ್ಯ. ಇಲ್ಲದಿದ್ದರೆ ಬದುಕಿನ ಸಣ್ಣಸಣ್ಣ ಆಘಾತಗಳನ್ನು ಕೂಡ ನಾವು ತಾಳಿಕೊಳ್ಳಲಾರೆವು. ಬದುಕೆಂದರೆ ತಾವರೆ ಎಲೆಯ ಮೇಲಿನ ನೀರಿನ ಹಾಗೆ. ಅತ್ಯಾಕರ್ಷಕವಾದ ಬೆಳ್ಳನೆಯ ಮೋತಿಯಂತೆ ತಾವರೆ ಎಲೆಯ ಮೇಲೆ ಕಂಡು ಬರುವ ನೀರಿನ ಹನಿ ನೋಡಲು ಅದೆಷ್ಟು ಅಂದ. ನಿಜವಾದ ಮೋತಿಯೇ ಇರಬೇಕೆಂಬ ಭ್ರಮೆಯನ್ನು ಅದು ಹುಟ್ಟಿಸುತ್ತದೆ. ಆ ಭ್ರಮೆಯಲ್ಲೇ ಆ ಮೋತಿಯನ್ನು ಹಿಡಿಯಲು ಹೋದರೆ ಅದು ಕೈಗೆ ಸಿಗುವುದುಂಟೆ? ತಾವರೆ ಎಲೆಯನ್ನು ಅದೆಷ್ಟು ಜೋಪಾನವಾಗಿ ಹಿಡಿದುಕೊಂಡರೂ ಅದರ ಮೇಲೆ ಓಲಾಡುವ ಆ ಮೋತಿಯನ್ನು ನಾವು ನಮ್ಮ ಕೈವಶಮಾಡಿಕೊಳ್ಳಲಾರೆವು. ಈ ಕ್ಷಣ ಇಲ್ಲಿದೆ ಎಂದನಿಸಿದರೆ ಮತ್ತೊಂದು ಕ್ಷಣ ಸ್ವಲ್ಪ ಜಾರಿರುತ್ತದೆ. ಜಾರುವುದು ಮಾತ್ರವಲ್ಲ, ಮೋತಿಯಂತೆ ಕಾಣಿಸಿಕೊಂಡ ತನ್ನ ಅಸ್ತಿತ್ತ್ವವನ್ನೂ ಅದು ಕಳೆದುಕೊಂಡಿರುತ್ತದೆ. ನೆಲದಲ್ಲಿ ಬಿದ್ದ ಆ ಮೋತಿಯನ್ನು ಹುಡುಕಲು ಹೋದರೆ ಅದು ಕಾಣಲು ಕೂಡ ಸಿಗುವುದಿಲ್ಲ, ಇನ್ನು ಹೆಕ್ಕುವುದೆಲ್ಲಿಯ ಮಾತು. ಬದುಕು ಕೂಡ ಹಾಗೆಯೇ. ಸಿರಿ – ಸಂಪತ್ತು ಕೂಡ ಅಷ್ಟೆಯೆ. ಇವತ್ತಿದ್ದರೆ ನಾಳೆ ಇದ್ದೀತೆಂದು ಖಚಿತವಾಗಿ ಹೇಳುವಂತಿಲ್ಲ. ಇವತ್ತು ಇರುವ ರೀತಿಯಲ್ಲೇ ಅದು ನಾಳೆಯೂ ಇದ್ದೀತು ಎಂಬ ಖಾತರಿಯೂ ಇಲ್ಲ. ಈ ದೃಷ್ಟಾಂತದ ಮೂಲಕವೇ ಶಂಕರಾಚಾರ್ಯರು ನಮಗೆ ಬದುಕಿನ ಸತ್ಯ ದರ್ಶನ ಮಾಡಿಕೊಡುತ್ತಾರೆ. ತಾವರೆ ಎಲೆಯ ಮೇಲಿನ ನೀರು ಅದೆಷ್ಟು ಚಂಚಲವೋ ನಮ್ಮ ಜೀವನವೂ ಅಷ್ಟೇ ಚಂಚಲ. ಆದರೂ ಅದನ್ನು ಅರಿಯದೆ ನಾವು ದುರಭಿಮಾನವನ್ನು ಬೆಳಸಿಕೊಂಡಿರುತ್ತೇವೆ. ನಿಜಕ್ಕಾದರೆ ಈ ದುರಭಿಮಾನವೆಂಬ ರುಜೆಯೇ ನಮ್ಮನ್ನು ಮಾತ್ರವಲ್ಲ, ಇಡಿಯ ಜಗವನ್ನೇ ಉಣ್ಣುತ್ತಿದೆ.