Home » ನಾವೇ ಸುಖಿಗಳು
 

ನಾವೇ ಸುಖಿಗಳು

by Kundapur Xpress
Spread the love
  1. ಪರರ ಸೇವೆಗಾಗಿ ಸರ್ವಸ್ವವನ್ನೂ ತೊರೆಯುವವನು ಮಾತ್ರವೇ ಮುಕ್ತಿಗೆ ಅರ್ಹ ಎಂಬ ಮಾತನ್ನು ಸ್ವಾಮಿ ವಿವೇಕಾನಂದರು ಹೇಳುತ್ತಾರೆ. ಹಾಗೆಯೇ ಪ್ರೀತಿಯ ಮೂಲಕ, ಸಹಾನುಭೂತಿಯ ಮೂಲಕ ಮಾತ್ರವೇ ಒಳ್ಳೆಯ ಫಲಿತಾಂಶಗಳು ಉಂಟಾಗುತ್ತವೆ ಎಂಬ ಸತ್ಯವನ್ನು ಅವರು ನಮಗೆ ತಿಳಿಸುತ್ತಾರೆ. ಆದರೆ ಸ್ವಭಾವತಃ ಸ್ವಾರ್ಥಿಯಾಗಿರುವ ಮನುಷ್ಯನಿಗೆ ಈ ಸತ್ಯವನ್ನು ಅರಗಿಸಿ ಕೊಳ್ಳುವುದು ಕಷ್ಟವೇ ಆಗಿದೆ. ಮನುಷ್ಯನ ಸ್ವಾರ್ಥಪರತೆಯಿಂದಾಗಿಯೇ ಆತನ ಬದುಕು ದುಸ್ತರವಾಗಿದೆ; ಆತನ ಜತೆಗಿರುವವರ ಬದುಕು ನರಕ ಸದೃಶವಾಗಿದೆ. ಇಡಿಯ ಸಮಜವೇ ಅಶಾಂತಿ, ಕಲಹಗಳ ಉಗ್ರಾಣವಾಗಿದೆ ಅದಕ್ಕೆಂದೇ ವಿವೇಕಾನಂದರು ಎಚ್ಚರಿಸುತ್ತಾರೆ. ಸ್ವಾರ್ಥವೇ ಅಧರ್ಮ. ನಿಸ್ವಾರ್ಥವೇ ಧರ್ಮ. ಹೆಚ್ಚು ನಿಸ್ವಾರ್ಥಿಯಾಗಿರುವವನೇ ಧರ್ಮಿಷ್ಠ ಮತ್ತು ದೇವರಿಗೆ ಹತ್ತಿರ. ಈ ಮಾತನ್ನು ನಾವು ಸೂಕ್ಷ್ಮವಾಗಿ ಗಮನಿಸಿದಾಗಲೇ ನಿಸ್ವಾರ್ಥ ಬದುಕಿನಿಂದ ದೊರಕುವ ಆನಂದವೇ ನಿಜವಾದ ಆನಂದ ಎಂಬ ಸತ್ಯ ಸ್ಪಷ್ಟವಾಗುತ್ತದೆ. ಇನ್ನೊಬ್ಬನ ನೋವನ್ನು  ತಿಳಿಯಲೆತ್ನಿಸುವುದರಲ್ಲಿ ಸಹೃದಯತೆ ಇದೆ. ಒಮ್ಮೆ ಒಬ್ಬ ತರುಣ ತನ್ನ ಕಾಲಿನ ಬೂಟು ಏನೇನೂ ಚೆನ್ನಾಗಿಲ್ಲ ಎಂದು ದುಃಖ ಪಡುತ್ತಿದ್ದನಂತೆ. ಕೊನೆಗೊಂದು ದಿನ ಹಾಗೆ ದುಃಖಿಸುವುದನ್ನು ಅವನು ನಿಲ್ಲಿಸಿದಾಗ ಆತನ ಗೆಳೆಯ ಅದಕ್ಕೆ ಕಾರಣವೇನೆಂದು ಕೇಳಿದನಂತೆ. ಅದಕ್ಕೆ ಈ ತರುಣ ತಗ್ಗಿದ ಧ್ವನಿಯಲ್ಲಿ ‘ಇವತ್ತು ಕಾಲೇ ಇಲ್ಲದ ಒಬ್ಬ ದುರ್ಧೈವಿಯನ್ನು ಕಂಡೆ. ಯಾಕೋ ಆ ಕ್ಷಣವೇ ಬೂಟಿಗಾಗಿ ನಾನು ವ್ಯಥೆ ಪಡುವುದು ಅರ್ಥಹೀನ ಎಂದು ಅನ್ನಿಸಿತು’ ಎಂದನಂತೆ. ಬದುಕಿನ ಸತ್ಯವನ್ನು ಹೀಗೆ ನಾವು ಮನಗಾಣದೆ ನಿಸ್ವಾರ್ಥರಾಗುವುದು ಕಷ್ಟ. ಇತರರ ನೋವು – ದುಃಖವನ್ನು ನಾವು ಅರಿತರೆ ಈ ಪ್ರಪಂಚದಲ್ಲಿ ಅನೇಕರು ನಮಗಿಂತ ಹೆಚ್ಚು ದುಃಖಿಗಳಾಗಿದ್ದಾರೆ ಎಂಬ ಸತ್ಯ ನಮಗೆ ಗೋಚರವಾಗುತ್ತದೆ. ಆಗ ಈ ಪ್ರಪಂಚದಲ್ಲಿ ನಾವೇ ಹೆಚ್ಚು ಸುಖಿಗಳು ಎಂಬ ವಿಚಾರವೂ ನಮಗೆ ಸ್ಪಷ್ಟವಾಗುತ್ತದೆ!

   

Related Articles

error: Content is protected !!