ಅಕ್ರಾ (ಘಾನಾ) : 2 ದಿನಗಳ ಘಾನಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಲ್ಲಿನ ಅತ್ಯುಚ್ಚ ಗೌರವ ನೀಡಿ ಗೌರವಿಸಲಾಗಿದೆ. ಅಧ್ಯಕ್ಷ ಜಾನ್ ಡ್ರಾಮಾನಿ ಮಹಮಾ ಅವರು ಘಾನಾದ ರಾಷ್ಟ್ರೀಯ ಗೌರವವಾದ ‘ದ ಆಫಿಸರ್ ಆಫ್ ದ ಆರ್ಡರ್ ಆಫ್ ದ ಸ್ಟಾರ್ ಆಫ್ ಘಾನಾ’ ಪ್ರಶಸ್ತಿಯನ್ನು ಮೋದಿ ಅವರಿಗೆ ಪ್ರದಾನ ಮಾಡಿದ್ದಾರೆ.ಇದು ಮೋದಿ ಅವರಿಗೆ 24ನೇ ದೇಶದ ಅತ್ಯು ಚ್ಚಗೌರವವಾಗಿದೆ
ತಮ್ಮ ವಿಶಿಷ್ಟ ರಾಜನೀತಿ ಮತ್ತು ಪ್ರಭಾವಶಾಲಿ ಜಾಗತಿಕ ನಾಯಕತ್ವಕ್ಕಾಗಿ ಸಂದ ಗೌರವವನ್ನು ಸ್ವೀಕರಿಸಿದ ಮೋದಿ,ಅದನ್ನು ಎರಡೂ ರಾಷ್ಟ್ರಗಳ ಯುವಕರ ಉಜ್ವಲ ಭವಿಷ್ಯ, ಭಾರತ ಮತ್ತು ಘಾನಾ – ನಡುವಿನ ಐತಿಹಾಸಿಕ ನಂಟು ಹಾಗೂ ಶ್ರೀಮಂತ ಸಂಸ್ಕೃತಿ ಮತ್ತು ವಿವಿಧತೆಗೆ ಅರ್ಪಿಸಿದ್ದಾರೆ.
ಬಳಿಕ ಮಾತನಾಡಿದ ಅವರು, ‘ 140 ಕೋಟಿ ಭಾರತೀಯರ ಪರವಾಗಿ ಈ ಪ್ರಶಸ್ತಿ ಯನ್ನು ಸ್ವೀಕರಿಸುತ್ತಿದ್ದೇನೆ. ಈ ಗೌರವದಿಂದಾಗಿ, ಭಾರತ ಮತ್ತು ಘಾನಾದ ಸ್ನೇಹವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಜವಾಬ್ದಾರಿಯೂ ನನ್ನ ಹೆಗಲೇರಿದೆ. ಭಾರತ ಯಾವಾಗಲೂ ಘಾನಾ ಜನರೊಂದಿಗೆ ನಿಲ್ಲುತ್ತದೆ ಮತ್ತು ವಿಶ್ವಾಸಾರ್ಹ ಸ್ನೇಹಿತ ಮತ್ತು ಅಭಿವೃದ್ಧಿ ಪಾಲುದಾರನಾಗಿ ಕೊಡುಗೆ ನೀಡುವುದನ್ನು ಮುಂದುವರಿಸುತ್ತದೆ’ ಎಂಬ ಭರವಸೆ ನೀಡಿದ್ದಾರೆ. 3 ದಶಕಗಳ ಬಳಿಕ ಘಾನಾಗೆ ಹೋದ ಮೊದಲ ಭಾರತೀಯ ಪ್ರಧಾನಿ ಮೋದಿ ಆಗಿದ್ದಾರೆ.

