ಬೆಂಗಳೂರು : ಮಾಗಡಿ ರಸ್ತೆ ಚನ್ನೇನಹಳ್ಳಿಯ ಜನಸೇವಾ ವಿದ್ಯಾಕೇಂದ್ರದ ಆವರಣದಲ್ಲಿ ಆಯೋಜಿಸಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ನೀತಿ-ನಿರ್ಧಾರಗಳನ್ನುನಿರೂಪಿಸುವ 3 ದಿನಗಳ ಮಹತ್ವದ ವಾರ್ಷಿಕ ಸಭೆ ಅಖಿಲ ಭಾರತೀಯ ಪ್ರತಿನಿಧಿ ಸಭಾಗೆ ಶುಕ್ರವಾರ ಚಾಲನೆ ದೊರಕಿತು.
ಆರ್‌ಎಸ್‌ಎಸ್ ಸರಸಂಘ ಸಂಚಾಲಕ ಡಾ.ಮೋಹನ್ ಭಾಗವತ್ ಮತ್ತು ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್‌ಎಸ್‌ಎಸ್‌ನ ಸಹ ಸರ ಕಾರ್ಯವಾಹ ಸಿ.ಆರ್.ಮುಕುಂದ ಅವರು ಪ್ರತಿ ವರ್ಷದಂತೆ ಈ ವರ್ಷವೂ ಸಭೆ ನಡೆಯುತ್ತಿದೆ. ವಿವಿಧ ಭಾಗಗಳ 1,482 ಪ್ರತಿನಿಧಿಗಳು ಭಾಗವಹಿಸಿದ್ದಾರೆ ಎಂದರು.
ಸಭೆಯಲ್ಲಿ ದೇಶಕ್ಕೆ ಮತ್ತು ಸಮಾಜಕ್ಕೆ ಕೊಡುಗೆ ನೀಡಿ ಇತ್ತೀಚೆಗೆ ಅಗಲಿದ ವಿವಿಧ ಕ್ಷೇತ್ರಗಳ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗಿದೆ. 3 ದಿನಗಳ ಈ ಸಭೆಯಲ್ಲಿ ಹೆಚ್ಚು ಸಮಯವನ್ನು ಸಂಘದ ಕಾರ್ಯಗಳ ವಿಮರ್ಶೆ ಹಾಗೂ ಯೋಜನೆಗಳ ವಿಸ್ತರಣೆಗಳ ಚರ್ಚೆಗೆ ಮೀಸಲಿಡಲಾಗುತ್ತದೆ.
ಈ ವರ್ಷ ಸಂಘ100 ವರ್ಷ ಪೂರೈಸಲಿದೆ ಹೀಗಾಗಿ ಶತಮಾನೋತ್ಸವ ಸಂಭ್ರಮಿಸುವುದಕ್ಕಿಂತ ಸಂಘದ ಕಾರ್ಯಗಳನ್ನು ವಿಸ್ತರಿಸಲಿದ್ದೇವೆ ಸಂಘದ ಕಾರ್ಯಗಳ ಸಾಮಾಜಿಕ ಪರಿಣಾಮ ಹಾಗೂ ಸಮಾಜದಲ್ಲಿ ತರಲಾಗುತ್ತಿರುವ ಬದಲಾವಣೆಗಳ ಬಗ್ಗೆ ಚರ್ಚಿಸಲಾಗುತ್ತಿದೆ ಎಂದರು.

