ಮುಂಬೈ : ಉತ್ತರ ಮಹಾರಾಷ್ಟ್ರದ ಜಲ್ಗಾಂವ್ ಜಿಲ್ಲೆಯಲ್ಲಿ ಬುಧವಾರ ಸಂಜೆ ರೈಲಿಗೆ ಬೆಂಕಿ ಬಿದ್ದಿದೆ ಎಂಬ ವದಂತಿ ನಂಬಿ ಕೆಲ ಪ್ರಯಾಣಿಕರು ಪಕ್ಕದ ಹಳಿಗೆ ಹಾರಿದಾಗ ಮತ್ತೊಂದು ರೈಲು ಹರಿದು ಕನಿಷ್ಠ 12 ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ. ಅವಘಡ ಸಂಭವಿಸಿದ ಕೂಡಲೇ ರೈಲ್ವೆ ಅಧಿಕಾರಿಗಳು ಮತ್ತು ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು. ಪುಷ್ಪಕ್ ಎಕ್ಸ್ಪ್ರೆಸ್ ರೈಲಿನಲ್ಲಿ ಬಿಸಿ ಗಾಳಿ ಕಾಣಿಸಿಕೊಂಡಿತು. ಇದನ್ನೇ ಪ್ರಯಾಣಿಕರು ಬೆಂಕಿ ಎಂದು ಭಾವಿಸಿ ಚೈನ್ ಎಳೆದು ರೈಲು ನಿಲ್ಲಿಸುವ ಪ್ರಯತ್ನ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅಪಾಯದಿಂದ ಪಾರಾಗಲು ರೈಲಿನಿಂದ ಮತ್ತೊಂದು ಹಳಿಗೆ ಜಿಗಿದರು. ಈ ವೇಳೆ ಬೆಂಗಳೂರಿನಿಂದ ದಿಲ್ಲಿಗೆ ತೆರಳುತ್ತಿದ್ದ ಕರ್ನಾಟಕ ಎಕ್ಸ್ಪ್ರೆಸ್ ಪ್ರಯಾಣಿಕರ ಮೇಲೆ ಹರಿದು ದುರಂತ ಸಂಭವಿಸಿದೆ ಎಂದು ಮಧ್ಯ ರೈಲ್ವೆಯ ಮುಖ್ಯ ವಕ್ತಾರ ಸ್ವಪ್ರಿಲ್ ನಿಲಾ ತಿಳಿಸಿದ್ದಾರೆ.