ಹೊಸದಿಲ್ಲಿ: ಅಟ್ಟಾರಿ-ವಾಘಾ ಗಡಿ ಗೇಟನ್ನು ಏ.23ರಂದೇ ತಾತ್ಕಾಲಿಕವಾಗಿ ಮುಚ್ಚಲಾಗಿದ್ದು, ಇದೀಗ ಅಫ್ಘಾನಿಸ್ತಾನದ 160 ಸರಕು ಸಾಗಣೆ ಟ್ರಕ್ಕುಗಳಿಗೆ ಪ್ರವೇಶಿಸಲು ಕೇಂದ್ರ ವಿಶೇಷ ಅನುಮತಿ ನೀಡಿದೆ. ಶುಕ್ರವಾರ ಉಭಯ ರಾಷ್ಟ್ರಗಳ ವಿದೇಶಾಂಗ ಸಚಿವರು ಇದೇ ಮೊದಲ ಬಾರಿಗೆ ಮಾತುಕತೆ ನಡೆಸಿದ ನಂತರ ಈ ಬೆಳವಣಿಗೆ ನಡೆದಿದೆ.
ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಅಫ್ಘಾನ್ ವಿದೇಶಾಂಗ ಸಚಿವ ಆಮಿರ್ ಖಾನ್ ಮುಟ್ಟಾಕಿ ಮಾತುಕತೆ ನಡೆಸಿದ್ದು, ಶನಿವಾರ ಅಫ್ಘಾನಿಸ್ತಾನದಿಂದ ಒಣಹಣ್ಣು ಮತ್ತು ಒಣಬೀಜಗಳನ್ನು ಸಾಗಿಸುವ 160 ಸರಕು ಟ್ರಕ್‌ಗಳಿಗೆ ಅಟ್ಟಾರಿ-ವಾಘಾ ಗಡಿ ಪ್ರವೇಶಿಸಲು ವಿಶೇಷ ಅನುಮತಿ ನೀಡಲಾಗಿದೆ.
ಅಫ್ಘಾನ್ ಟ್ರಕ್‌ಗಳಿಗೆ ಪಾಕಿಸ್ತಾನ ಅನುಮತಿಸಿದ್ದು, ಭಾರತದ ಅನುಮತಿಗೆ ಕಾಯುತ್ತಿದ್ದವು. ಪಾಕ್ ಮೂಲಕ ಬಂದ ಕಾರಣ ಟ್ರಕ್‌ಗಳನ್ನು ಅಟ್ಟಾರಿ-ವಾಘಾ ಗಡಿ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದ್ದು, ಕೆಲವು ಟ್ರಕ್‌ಗಳಿಂದ ಸರಕುಗಳನ್ನು ಗಡಿಯಲ್ಲೇ ಇಳಿಸಲಾಗಿತ್ತು. ಯಾಕೆಂದರೆ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತವನ್ನು ಭಾರತ ಬೆಂಬಲಿಸುತ್ತಿಲ್ಲ, ಆದರೂ ಗಡಿ ಪ್ರವೇಶಿಸಲು ಸರ್ಕಾರ ವಿಶೇಷ ಅನುಮತಿ ನೀಡಿತು. ಪಹಲ್ಗಾಮ್ ಉಗ್ರ ದಾಳಿ ಹಿನ್ನೆಲೆ ಪಾಕ್ ಪ್ರಜೆಗಳನ್ನು ತಮ್ಮ ತಾಯ್ತಾಡಿಗೆ ಕಳುಹಿಸಿ ಗಡಿ ಗೇಟನ್ನು ಮುಚ್ಚಲಾಗಿತ್ತು.

