ಅಹಮದಾಬಾದ್ : 265 ಜನರನ್ನು ಬಲಿಪಡೆದ ಅಹಮದಾಬಾದ್‌ನ ಏರ್ ಇಂಡಿಯಾ ಡ್ರೀಮ್ ಲೈನರ್ ವಿಮಾನ ದುರಂತದ ತನಿಖೆ ಚುರುಕುಗೊಂಡಿದ್ದು, ಇಡೀ ಘಟನೆಯ ಮೇಲೆ ಬೆಳಕು ಚೆಲ್ಲಬಹುದಾದ ವಿಮಾನದೊಳಗಿನ ಬ್ಲ್ಯಾಕ್ ಬಾಕ್ಸ್ ಮತ್ತು ಡಿವಿಆರ್ ಅನ್ನು ಅಧಿಕಾರಿಗಳ ತಂಡ ಶುಕ್ರವಾರ ಪತ್ತೆ ಹಚ್ಚಿದೆ. ಗುರುವಾರ, ಘಟನಾ ಸ್ಥಳದಲ್ಲಿನ ಬದುಕುಳಿದಿರಬಹುದಾದ ವ್ಯಕ್ತಿಗಳು ಮತ್ತು ಮೃತಪಟ್ಟವರ ಶವಗಳಿಗಾಗಿ ಹುಡುಕಾಟ ನಡೆಸಿದ್ದ ರಕ್ಷಣಾ ಸಿಬ್ಬಂದಿ, ಶುಕ್ರವಾರ ತಮ್ಮ ಗಮನವನ್ನು ಸಾಕ್ಷ್ಯ ಸಂಗ್ರಹದ ಮೇಲೆ ಕೇಂದ್ರೀಕರಿಸಿದ್ದಾರೆ
ವಿಮಾನ ಅಪಘಾತದ ತನಿಖೆ ನಡೆಸುವ ಹೊಣೆ ಹೊತ್ತಿರುವ ವಿಮಾನ ಅಪಘಾತ ತನಿಖಾ ಬ್ಯೂರೋ (ಎಎಐಬಿ)ದ ಅಧಿಕಾರಿಗಳ 40 ಜನರ ತಂಡವು, ಶುಕ್ರವಾರ ಅಪಘಾತ ನಡೆದ ವೈದ್ಯಕೀಯ ಕಾಲೇಜಿನ ವಸತಿ ಸಮುಚ್ಚಯದ ಮೇಲೆ ವಿಮಾನದೊಳಗಿದ್ದ ಬ್ಲ್ಯಾಕ್ ಬಾಕ್ಸ್ ಪತ್ತೆ ಮಾಡಿದೆ. ಜತೆಗೆ ವಿಮಾನದೊಳಗಿದ್ದ ಡಿವಿಆರ್ ಪತ್ತೆ ಹಚ್ಚುವಲ್ಲೂ ರಕ್ಷಣಾ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ನಿರ್ಣಾಯಕ ಪುರಾವೆ :
ವಿಮಾನ ಅಪಘಾತದ ತನಿಖೆಯಲ್ಲಿ ಕಪ್ಪು ಪೆಟ್ಟಿಗೆ ಹಾಗೂ ಡಿವಿಆರ್ ಮಹತ್ವದ ಪುರಾವೆ ಒದಗಿಸಲಿವೆ. ಕಿತ್ತಳೆ ಬಣ್ಣದಲ್ಲಿರುವ ಈ ಕಪ್ಪು ಪೆಟ್ಟಿಗೆ ಅಪಘಾತಕ್ಕೂ ಮೊದಲು ವಿಮಾನದ ವೇಗ, ಎತ್ತರ, ಮಾರ್ಗ, ನಕ್ಷೆ ಸೇರಿದಂತೆ ಎಲ್ಲ ತಾಂತ್ರಿಕ ವಿವರಗಳನ್ನೂ ದಾಖಲಿಸುತ್ತಿರುತ್ತದೆ. ಬೆಂಕಿ, ಸ್ಫೋಟ ಸೇರಿದಂತೆ ಯಾವುದೇ ಸ್ವರೂಪದ ಅವಘಡ ನಡೆದರೂ ಹಾನಿಗೀಡಾಗದ ರೀತಿಯಲ್ಲಿ ಇದನ್ನು ರೂಪಿಸಲಾಗಿರುತ್ತದೆ

