ನವದೆಹಲಿ : 26 ಅಮಾಯಕರ ಬಲಿಪಡೆದ ಪಹಲ್ಲಾಂ ನರಮೇಧದ ಬಳಿಕ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿ ಬೆನ್ನಲ್ಲೇ ಎರಡೂ ಪರಮಾಣು ಶಕ್ತಿ ಉಳ್ಳ ದೇಶಗಳ ಮಧ್ಯೆ ಯುದ್ಧದ ಚಟುವಟಿಕೆ ತೀವ್ರಗೊಂಡಿದೆ. ಗುರುವಾರ ಭಾರತೀಯ ನೌಕಾಪಡೆ ಪಾಕಿಸ್ತಾನದ ಜಲಗಡಿ ಸಮೀಪವೇ ಸಮರಾಭ್ಯಾಸ ನಡೆಸಿ ಪಾಕಿಸ್ತಾನಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದೆ. ಮತ್ತೊಂದೆಡೆ ಭಾರತ ದಾಳಿ ನಡೆಸುವ ಭೀತಿ ಇರುವ ಕಾರಣ ಪಾಕಿಸ್ತಾನ ತನ್ನ ಗಡಿ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳ ನಿಯೋಜನೆ ಮಾಡಿದೆ.

ಇದರ ಜೊತೆಗೆ ಭಾರತದ ವಾಯುದಾಳಿ ಸಾಧ್ಯತೆಗೆ ಬೆಚ್ಚಿರುವ ಪಾಕಿಸ್ತಾನವು, ರಾಜಧಾನಿ ಇಸ್ಲಾಮಾಬಾದ್, ವಾಣಿಜ್ಯ ರಾಜಧಾನಿ ಕರಾಚಿ ಸೇರಿದಂತೆ ಕೆಲ ನಗರಗಳಲ್ಲಿನ ವಾಯು ಸೀಮೆಯನ್ನು ನಿತ್ಯ 4 ಗಂಟೆ ಕಾಲ ಸಂಚಾರ ನಿಷೇಧ ವಲಯವನ್ನಾಗಿ ಘೋಷಿಸಿದೆ.
ಗಡಿಗೆ ಸನಿಹದ ಸಮುದ್ರದಲ್ಲಿ ತಾಲೀಮು :
ಭಾರತೀಯ ನೌಕಾಪಡೆ ಅರಬ್ಬಿ ಸಮುದ್ರದ ವಿಶೇಷ ಆರ್ಥಿಕ ವಲಯದಲ್ಲಿ ತನ್ನ ಸಮರಾಭ್ಯಾಸ ತೀವ್ರಗೊಳಿಸಿದೆ. ಪಾಕಿಸ್ತಾನದ ಜಲಗಡಿಯಿಂದ ಕೇವಲ 80 ನಾಟಿಕಲ್ ಮೈಲು ದೂರದಲ್ಲೇ ನೌಕಾಪಡೆ ನಡೆಸುತ್ತಿರುವ ಸೇನಾ ಕಸರತ್ತಿನಲ್ಲಿ ಆ್ಯಂಟಿ ಶಿಪ್ ಮತ್ತು ಆ್ಯಂಟಿ ಏರ್ ಕ್ರಾಫ್ಟ್‌ಗಳನ್ನು ಬಳಸಿಕೊಳ್ಳಲಾಗಿದೆ. ಇದಲ್ಲದೆ ಗುಜರಾತ್ ಕರಾವಳಿಯ ಮುಂಚೂಣಿ ಪ್ರದೇಶದಲ್ಲಿ ಭಾರತದ ಕರಾವಳಿ ಕಾವಲು ಪಡೆ ನೌಕೆ ನಿಯೋಜಿಸಲಾಗಿದೆ. ನೌಕಾಪಡೆ ಜತೆಗೆ ಸೇರಿಕೊಂಡು ಸಮುದ್ರ ಮಾರ್ಗದ ಮೇಲೆ ಕಣ್ಣಾವಲು ಇಡಲಾಗುತ್ತಿದೆ.
ಪಾಕ್‌ನಿಂದ ಸೇನೆ ನಿಯೋಜನೆ : ಈ ನಡುವೆ ಭಾರತದಿಂದ ದಾಳಿ ಭೀತಿ ಹೆಚ್ಚಾದ ಬೆನ್ನಲ್ಲೇ ಭಾರತದ ಗಡಿ ಭಾಗದಲ್ಲಿ ಪಾಕಿಸ್ತಾನ ಭಾರೀ ಪ್ರಮಾಣದಲ್ಲಿ ಯೋಧರು, ಶಸ್ತ್ರಾಸ್ತ್ರ, ವಾಯು ರಕ್ಷಣಾ ವ್ಯವಸ್ಥೆಯನ್ನು ನಿಯೋಜಿಸಿದೆ. ಈ ಶಸ್ತ್ರಾಸ್ತ್ರಗಳ ಪೈಕಿ ಚೀನಿ ನಿರ್ಮಿತ ಯುದ್ಧೋಪಕರಣಗಳು ಕೂಡಾ ಇವೆ ಎನ್ನಲಾಗಿದೆ.

