ಹೊಸದಿಲ್ಲಿ: ತೀವ್ರತೆ ಪಡೆಯುತ್ತಿರುವ ರಷ್ಯಾ- ಉಕ್ರೇನ್ ಸಂಘರ್ಷವನ್ನು ಮಾತುಕತೆಯ ಮೂಲಕ ಪರಿಹರಿಸುವ ಉದ್ದೇಶದೊಂದಿಗೆ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಈ ವಾರ ಮಾಸ್ಕೋಗೆ ಪ್ರಯಾಣಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಧಾನಿ ನರೇಂದ್ರ ಮೋದಿ, ಕಳೆದೆರಡು ತಿಂಗಳಲ್ಲಿ ರಷ್ಯಾ ಮತ್ತು ಉಕ್ರೇನ್‌ಗೆ ಭೇಟಿ ನೀಡಿ ವ್ಯಾಡಿಮಿರ್ ಪುಟಿನ್ ಮತ್ತು ವೊಲೊಡಿಮಿರ್ ಝಲೆಕ್ಷಿ ಅವರನ್ನು ಭೇಟಿಯಾದ ನಂತರ ಈ ಮಹತ್ವದ ಬೆಳವಣಿಗೆ ನಡೆದಿದೆ. ಉಕ್ರೇನ್ ಪ್ರವಾಸ ಮತ್ತು ಅಧ್ಯಕ್ಷ ಝಲೆಕ್ಷಿ ಅವರೊಂದಿಗಿನ ಭೇಟಿಯ ಬಳಿಕ, ಪ್ರಧಾನಿ ಮೋದಿ ಆ.27ರಂದು ರಷ್ಯಾ ಅಧ್ಯಕ್ಷ ಪುಟಿನ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದರು.
ದೂರವಾಣಿ ಸಂಭಾಷಣೆ ವೇಳೆ ಪ್ರಸ್ತಾವ ? ಈ ದೂರವಾಣಿ ಸಂಭಾಷಣೆಯ ವೇಳೆ ಎನ್‌ಎಸ್‌ಎ ದೋವಲ್ ಶಾಂತಿ ಮಾತುಕತೆಗಾಗಿ ಮಾಸ್ಕೋಗೆ ಪ್ರಯಾಣಿಸಲು ನಾಯಕರು ನಿರ್ಧರಿಸಿದ್ದರು ಎನ್ನಲಾಗಿದೆ. ಆದರೆ, ಈ ಭೇಟಿಯ ವೇಳಾಪಟ್ಟಿಯ ಬಗ್ಗೆ ಪ್ರಸ್ತುತ ಯಾವುದೇ ವಿವರಗಳು ಲಭ್ಯವಾಗಿಲ್ಲ. ಪ್ರಧಾನಿ ಮೋದಿ ತಮ್ಮ ಉಕ್ರೇನ್ ಭೇಟಿಯ ಒಳನೋಟಗಳನ್ನು ರಷ್ಯಾ ಅಧ್ಯಕ್ಷರೊಂದಿಗೆ ಹಂಚಿಕೊಳ್ಳುವ ಜತೆಗೆ, ಸಂಘರ್ಷಕ್ಕೆ ಶಾಂತಿಯುತ ಪರಿಹಾರವನ್ನು ಕಂಡುಕೊಳ್ಳುವಲ್ಲಿ ಎರಡೂ ದೇಶಗಳೊಂದಿಗೆ ಮಾತುಕತೆ ಮತ್ತು ರಾಜತಾಂತ್ರಿಕ ಮಾರ್ಗಗಳ ಮಹತ್ವವನ್ನು ಒತ್ತಿ ಹೇಳಿದ್ದರು ಎಂದು ಪ್ರಧಾನಿ ಕಚೇರಿ (ಪಿಎಂಒ) ಪ್ರಕಟಣೆ ತಿಳಿಸಿದೆ