ವಾಷಿಂಗ್ಟನ್ : ಸರಿ ಸುಮಾರು ಎರಡೂವರೆ ಶತಮಾನದ ಅಮೆರಿಕದ ಸಂಸದೀಯ ಇತಿಹಾಸದಲ್ಲೇ ಅತ್ಯಂತ ತುರುಸಿನ ಸ್ಪರ್ಧೆ ಕಂಡ ಅಧ್ಯ ಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ (78ವರ್ಷ) ದೇಶದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ನ.5ರಂದು ಅಧ್ಯಕ್ಷೀಯ ಸ್ಥಾನಕ್ಕೆ ನಡೆದಿದ್ದ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿದ್ದ ಟ್ರಂಪ್, ತಮ್ಮ ಎದುರಾಳಿ, ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರನ್ನು ಸೋಲಿಸಿ ಅಮೆರಿಕದ 47ನೇ ಅಧ್ಯಕ್ಷರಾಗಿ ಜಯದ ನಗೆ ಬೀರಿದ್ದಾರೆ. ಜನವರಿಯಲ್ಲಿ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಹಿಂದೆ 2017-21ರ ಅವಧಿಯಲ್ಲೂ ಅಮೆರಿಕದ ಅಧ್ಯಕ್ಷರಾಗಿದ್ದ ಟ್ರಂಪ್ ಅವರ ಈಗಿನ ಗೆಲುವನ್ನು ಐತಿಹಾಸಿಕ ಪುನರಾಗಮನ ಎಂದು ಬಣ್ಣಿಸಲಾಗಿದೆ.