ನವದೆಹಲಿ : ವಿಶ್ವದ ಅತಿದೊಡ್ಡ ಆರೋಗ್ಯ ವಿಮೆ ಯೋಜನೆ ಎಂಬ ಹಿರಿಮೆ ಹೊಂದಿರುವ ಆಯುಷ್ಮಾನ್ ಭಾರತ್ ವಿಮಾ ಯೋಜನೆಯನ್ನು 70 ವರ್ಷ ಮತ್ತು ಅದಕ್ಕೆ ಮೇಲ್ಪಟ್ಟ ಎಲ್ಲಾ ವಯೋಮಿತಿ ಯವರೆಗೂ ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ವಯೋಮಿತಿಯ ಎಲ್ಲಾ ನಾಗರಿಕರಿಗೂ ಇನ್ನು ಮುಂದೆ 5 ಲಕ್ಷ ರು.ವರೆಗಿನ ಆರೋಗ್ಯ ವಿಮೆ ಸಿಗಲಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ಇಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಇದರೊಂದಿಗೆ ಕಳೆದ ಲೋಕಸಭಾ ಚುನಾವಣೆ ವೇಳೆ ನೀಡಿದ್ದ ಪ್ರಮುಖ ಭರವಸೆಯೊಂದನ್ನು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಪೂರೈಸಿದಂತೆ ಆಗಿದೆ. ಜೊತೆಗೆ 4.5 ಕೋಟಿ ಕುಟುಂಬಗಳ 6 ಕೋಟಿ ಹಿರಿಯ ನಾಗರಿಕರಿಗೆ ದೊಡ್ಡ ಆರ್ಥಿಕ ಹೊರೆ ಯನ್ನು ನಿವಾರಿಸುವ ಬಹುದೊಡ್ಡ ಕೊಡುಗೆಯನ್ನು ಹಿರಿಯರ ಸಮುದಾಯಕ್ಕೆ ನೀಡಿದಂತಾಗಿದೆ.