ರಿಯೊ ಡಿ ಜನೈರೊ : ಏ.22ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಭಯೋತ್ಪಾದಕರು ಧರ್ಮ ಯಾವುದೆಂದು ಕೇಳಿ 25 ಹಿಂದು ಪ್ರವಾಸಿಗರನ್ನು ಮತ್ತು ಓರ್ವ ಸ್ಥಳೀಯ ಕುದುರೆ ಸವಾರಿಯನ್ನು ಮೃಗೀಯವಾಗಿ ಕೊಂದ ಕುಕೃತ್ಯವನ್ನು ಖಂಡಿಸಿರುವ ಬ್ರಿಕ್ಸ್ ನಾಯಕರು, ಭಯೋತ್ಪಾದನೆಯ ಉದ್ದೇಶ ಏನೇ ಇರಲಿ, ಮತ್ತದರ ಪ್ರಚೋದಕರು ಯಾರೇ ಆಗಿರಲಿ, ಎಲ್ಲೇ ದಾಳಿ ಮಾಡಿದರೂ ಅದೊಂದು ಕ್ರಿಮಿನಲ್ ಮತ್ತು ಅಸಮರ್ಥನೀಯ ಅಪರಾಧವೆಂದು ಶೃಂಗಸಭೆಯಲ್ಲಿ ಬಿಡುಗಡೆ ಮಾಡಿದ జంటి ಘೋಷಣೆಯಲ್ಲಿ ಆರೋಪಿಸಿದ್ದಾರೆ.
ಗಡಿಯಾಚೆಯ ಭಯೋತ್ಪಾದನೆ, ಗಡಿಯಾಚೆ ಭಯೋತ್ಪಾದಕರ ಚಲನವಲನ, ಭಯೋತ್ಪಾದನೆಗೆ ಹಣಕಾಸು ಪೂರೈಕೆ ಮತ್ತು ಪಾತಕಿಗಳಿಗೆ ಅಡಗುದಾಣ ಕಲ್ಪಿಸುವುದೇ ಇತ್ಯಾದಿಯಾಗಿ ಭಯೋತ್ಪಾದನೆಯನ್ನು ಅದರೆಲ್ಲಾ ಸ್ವರೂಪಗಳೊಂದಿಗೆ ಮಟ್ಟ ಹಾಕುವ ವಿಚಾರದಲ್ಲಿ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತೇವೆ ಎಂದು ಬ್ರಿಕ್ಸ್ ನಾಯಕರು ಜಂಟಿ ಘೋಷಣೆಯಲ್ಲಿ ಹೇಳಿದ್ದಾರೆ.
ಭಯೋತ್ಪಾದನೆಯನ್ನು ಯಾವುದೇ ಮತ, ರಾಷ್ಟ್ರೀಯತೆ, ನಾಗರೀಕತೆ ಅಥವಾ ಜನಾಂಗೀಯ ಗುಂಪಿನೊಂದಿಗೆ ಜೋಡಿಸ ಕೂಡದು. ಭಯೋತ್ಪಾದಕರು ಮತ್ತು ಇವರಿಗೆ ಪ್ರಚೋದನೆ ನೀಡುವವರನ್ನು ಕಟ್ಟುನಿಟ್ಟಾಗಿ ಹೊಣೆಗಾರರನ್ನಾಗಿಸಿ, ವಸ್ತುನಿಷ್ಠ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕಾನೂನಿನಲ್ಲಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಬ್ರಿಕ್ಸ್ ನಾಯಕರು ಆಗ್ರಹಿಸಿದ್ದಾರೆ.

