ನವದೆಹಲಿ : ವಿಶೇಷ ಸ್ಥಾನಮಾನ ಹಾಗೂ 50 ಸಾವಿರ ಕೋಟಿ ರು. ಅನುದಾನ ಕೇಳಿದ್ದ ಮಿತ್ರ ಪಕ್ಷಗಳ ರಾಜ್ಯಗಳಾದ ಆಂಧ್ರಪ್ರದೇಶ ಹಾಗೂ ಬಿಹಾರಕ್ಕೆ ಮೋದಿ ಸರ್ಕಾರ ಬಜೆಟ್‌ನಲ್ಲಿ ಕೇಳಿದಷ್ಟು ಅಲ್ಲದಿದ್ದರೂ ಭರ್ಜರಿ ಕೊಡುಗೆಯನ್ನೇ ನೀಡಿದೆ. ಆಂಧ್ರಪ್ರದೇಶ ರಾಜಧಾನಿ ಅಮರಾವತಿ ಅಭಿವೃದ್ಧಿಗೆ 15 ಸಾವಿರ ಕೋಟಿ ರು. ಹಾಗೂ ಬಿಹಾರ ರಸ್ತೆ ಅಭಿವೃದ್ಧಿಗೆ 26 ಸಾವಿರ ಕೋಟಿ ರು. ಅನುದಾನ ಘೋಷಿಸಲಾಗಿದೆ.
ಇತ್ತೀಚೆಗೆ ಬಿಜೆಪಿಗೆ ಬಹುಮತ ಬಾರದ ಕಾರಣ ಎನ್‌ಡಿಎ ಅಂಗಪಕ್ಷಗಳಾದ ಬಿಹಾರದ ಜೆಡಿಯು ಹಾಗೂ ಆಂಧ್ರಪ್ರದೇಶದ ತೆಲುಗು ದೇಶಂ ಪಕ್ಷಗಳೇ ಮೋದಿ ಸರ್ಕಾರಕ್ಕೆ ಆಧಾರವಾಗಿವೆ. ಹೀಗಾಗಿಯೇ ಈ ಎರಡೂ ಪಕ್ಷಗಳು ತಮ್ಮ ತಮ್ಮ ರಾಜ್ಯಗಳಿಗೆ ವಿಶೇಷ ಸ್ಥಾನಮಾನ ಹಾಗೂ 50 ಸಾವಿರ ಕೋಟಿ ರು. ಅನುದಾನ ಕೇಳಿದ್ದವು.