ನವದೆಹಲಿ : ಮುಂದಿನ 5 ವರ್ಷ ಅವಧಿಗೆ ಭಾರತಕ್ಕೆ ದಿಕ್ಕೂಚಿ ನೀಡಬಲ್ಲ ಹಾಗೂ 2047ಕ್ಕೆ ಭಾರತವನ್ನು ವಿಕಸಿತ ದೇಶವನ್ನಾಗಿ ಮಾಡಲು ಅಡಿಪಾಯ ಹಾಕಬಲ್ಲ ಬಜೆಟ್ ಎಂದು ಬಣ್ಣಿಸಲಾದ 2024-25ನೇ ಸಾಲಿನ ಮಂಗಡಪತ್ರವನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಮಂಡಿಸಿದರು. ಇದು ನಿರ್ಮಲಾ ಅವರ ದಾಖಲೆಯ 7ನೇ ಮುಂಗಡಪತ್ರವೂ ಹೌದು. ಮೋದಿ 3.0 ಸರ್ಕಾರದ ಮೊದಲ ಮುಂಗಡಪತ್ರವೂ ಆದ ಇದರಲ್ಲಿ ಉದ್ಯೋಗ ಸೃಷ್ಟಿ, ಕೌಶಲ್ಯಾಭಿವೃದ್ಧಿ, ಮೂಲ ಸೌಕರ್ಯಕ್ಕೆ ಇದರಲ್ಲಿ ಭರ್ಜರಿ ಕೊಡುಗೆ ನೀಡಲಾಗಿದೆ. ಇದರ ಜತೆಗೆ ದಶಕದ ಬಳಿಕ ತೆರಿಗೆ ಸ್ಟ್ರಾಬ್ ಬದಲು ಮಾಡಲಾಗಿದ್ದು. ಸ್ಟಾಂಡರ್ಡ್ ಡಿಡಕ್ಷನ್ ಮೊತ್ತವನ್ನು 50 ಸಾವಿರ ರು.ನಿಂದ 75 ಸಾವಿರ ರು.ಗೆ ಏರಿಸಲಾಗಿದೆ. ರೈತರು, ಮಹಿಳೆಯರಿಗೆ ಹೆಚ್ಚಿನ ಮನ್ನಣೆ ನೀಡಲಾಗಿದೆ. ಇನ್ನು ಚಿನ್ನ, ಮೊಬೈಲ್ ಹಾಗೂ ಕ್ಯಾನ್ಸರ್ ತಡೆ ಔಷಧಗಳ ದರವನ್ನು ಇಳಿಸಲಾಗಿದೆ. ಕೃಷಿ, ಮೂಲಸೌಕರ್ಯಕ್ಕೂ ಹೆಚ್ಚಿನ ಒತ್ತು ನೀಡಲಾಗಿದ್ದು, ರೈಲ್ವೆಗೆ ಕಳೆದ ಸಲಕ್ಕಿಂತ ಹೆಚ್ಚು ಅನುದಾನ ನೀಡಿ ದಾಖಲೆಯ 2.55 ಲಕ್ಷ ಕೋಟೆ ರು. ಒದಗಿಸಲಾಗಿದೆ. ಇನ್ನು ಮಿತ್ರಪಕ್ಷಗಳಾದ ಜೆಡಿಯು ಹಾಗೂ ಟಿಡಿಪಿ ಬೆಂಬಲದ ಮೇಲೆಯೇ ಮೋದಿ ಸರ್ಕಾರ ನಿಂತಿರುವ ಕಾರಣ ಬಿಹಾರಕ್ಕೆ 26 ಸಾವಿರ ಕೋಟಿ ರು. ಹಾಗೂ ಆಂಧ್ರಪ್ರದೇಶಕ್ಕೆ 15 ಸಾವಿರ ಕೋಟಿ ರು. ಅನುದಾನ ನೀಡಲಾಗಿದೆ. ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ‘ಭಾರತದ ಯಶೋಗಾಥೆಯನ್ನೂ, ಭವ್ಯ ಭವಿಷ್ಯವನ್ನೂ ಈ ಬಜೆಟ್ ಎತ್ತಿ ತೋರಿಸಿದೆ. ದೇಶವನ್ನು ಜಗತ್ತಿನ 3ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ರೂಪಿಸಲು ಹಾಗೂ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಬಜೆಟ್‌ನಲ್ಲಿ ಅಡಿಗಲ್ಲು ಹಾಕಿದ್ದೇವೆ. ಯುವಕರು, ಹಿಂದುಳಿದ ವರ್ಗ, ಮಹಿಳೆಯರು, ಮಧ್ಯಮ ವರ್ಗ, ಉದ್ಯೋಗ ಸೃಷ್ಟಿ ಉತ್ಪಾದನಾ ಕ್ಷೇತ್ರ, ಮೂಲಸೌಕರ್ಯಕ್ಕೆ ಬಜೆಟ್ ಒತ್ತು ನೀಡಿದೆ’ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ