ನವದೆಹಲಿ : 10 ವರ್ಷಗಳ ಹಿಂದೆ ನರೇಂದ್ರ ಮೋದಿಯವರ ಅಬ್ಬರದ ಗೆಲುವಿನ ಬಳಿಕ ನೆಲಕಚ್ಚಿದ್ದ 140 ವರ್ಷಗಳ ಇತಿಹಾಸವಿರುವ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಈ ಬಾರಿಯ ಲೋಕಸಭೆ ಚುನಾವಣೆಯ ಮೂಲಕ ಪುನಃ ಫೀನಿಕ್ಸ್ ಹಕ್ಕಿಯಂತೆ ಎದ್ದುಬಂದಿದೆ. ಕಾಂಗ್ರೆಸ್ ಪಕ್ಷದ ಪುನರುತ್ಥಾನದ ಜೊತೆಗೇ ಬಿಜೆಪಿಗೆ ಪ್ರಬಲ ವಿರೋಧಿ ಶಕ್ತಿಯಾಗಿ ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಮೈತ್ರಿಕೂಟ ಕೂಡ ಎದ್ದುನಿಂತಿದೆ.
ಕಳೆದ ಎರಡು ಚುನಾವಣೆಗಳಲ್ಲಿ ಏಕಾಂಗಿಯಾಗಿ ಸ್ಪರ್ಧೆ ನೀಡಲು ವಿಫಲವಾದ ಕಾಂಗ್ರೆಸ್ ಪಕ್ಷವು ಈ ಬಾರಿಯ ಚುನಾವಣೆಗೂ ಮುನ್ನ ಸಣ್ಣಪುಟ್ಟ ರಾಜಕೀಯ ಪಕ್ಷಗಳೆಲ್ಲ ಸೇರಿ ರಚಿಸಿಕೊಂಡ ಇಂಡಿಯಾ ಮೈತ್ರಿಕೂಟಕ್ಕೆ ತಾನೂ ಅಹಂ ಬಿಟ್ಟು ಸೇರ್ಪಡೆಗೊಂಡಿತ್ತು. ಆ ಪಕ್ಷಗಳಿಗೆ ಹೋಲಿಸಿದರೆ ಸಹಜವಾಗಿಯೇ ದೊಡ್ಡ ಪಕ್ಷವಾಗಿದ್ದ ಕಾಂಗ್ರೆಸ್, ಈಗ ಸೀಟು ಗಳಿಕೆ ಹೆಚ್ಚಿಸಿಕೊಂಡು ಇಂಡಿಯಾ ಮೈತ್ರಿಕೂಟಕ್ಕೆ ನೈಸರ್ಗಿಕ ನಾಯಕನಾಗಿ ಹೊರಹೊಮ್ಮಿದೆ.