ವಾಷಿಂಗ್ಟನ್ : ಭಾರತ, ಚೀನಾ ಸೇರಿ ಹಲವು ದೇಶಗಳ ವಿರುದ್ಧ ತೆರಿಗೆಗೆ ಸಂಬಂಧಿಸಿದಂತೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಏ.2ರಿಂದಲೇ ಈ ದೇಶಗಳ ಮೇಲೆ ರೆಸಿಪ್ರೋಕಲ್ ತೆರಿಗೆ (ಪ್ರತಿ ತೆರಿಗೆ) ಹಾಕುವುದಾಗಿ ಘೋಷಿಸಿದ್ದಾರೆ.
ಟ್ರಂಪ್ ಅವರ ಈ ನಿರ್ಧಾರದಿಂದಾಗಿ ಅಮೆರಿಕಕ್ಕೆ ರಫ್ತು ಆಗುವ ಭಾರತದ ಉತ್ಪನ್ನಗಳು ಅಮೆರಿಕನ್ನರಿಗೆ ದುಬಾರಿಯಾಗುವ ಮೂಲಕ ಭಾರತೀಯ ಉತ್ಪನ್ನಗಳಿಗೆ ಬೇಡಿಕೆ ಕುಸಿಯುವ ಆತಂಕ ಮನೆಮಾಡಿದೆ.
ಮಂಗಳವಾರ ಅಮೆರಿಕದ ಕಾಂಗ್ರೆಸ್‌ನ ಜಂಟಿ ಕಲಾಪವನ್ನುದ್ದೇಶಿಸಿ ಮಾತನಾಡಿದ ಟ್ರಂಪ್, ಸುಂಕ ಹೇರಿಕೆ ಘೋಷಣೆ ಮಾಡಿದ್ದಾರೆ. ಅನ್ಯ ದೇಶಗಳು ನಮ್ಮ ವಿರುದ್ಧ ದಶಕಗಳಿಂದ ಹೆಚ್ಚಿನ ತೆರಿಗೆ ವಿಧಿಸುತ್ತಾ ಬಂದಿವೆ. ಇದೀಗ ನಮ್ಮ ಸರದಿ. ನಾವೀಗ ಆ ದೇಶ ಗಳ ವಿರುದ್ಧ ತೆರಿಗೆ ಹಾಕುತ್ತೇವೆ. ಯುರೋಪಿಯನ್ ಯೂನಿಯನ್, ಚೀನಾ, ಬ್ರೆಜಿಲ್, ಭಾರತ, ಮೆಕ್ಸಿಕೋ, ಕೆನಡಾ ಮತ್ತಿತರ ದೇಶಗಳು ನಾವು ಅವರ ಮೇಲೆ ವಿಧಿಸುವುದಕ್ಕಿಂತ ಹೆಚ್ಚಿನತೆರಿಗೆಯನ್ನು ನಮ್ಮ ಉತ್ಪನ್ನಗಳ ಮೇಲೆ ವಿಧಿಸುತ್ತಿವೆ. ಭಾರತವು ಅಮೆರಿಕದ ವಾಹನಗಳ ಮೇಲೆ ಶೇ.100ಕ್ಕಿಂತಲೂ ಹೆಚ್ಚಿನ ತೆರಿಗೆ ವಿಧಿಸುತ್ತಿದೆ.ಇದು ನ್ಯಾಯ ಸಮ್ಮತವಲ್ಲ ಎಂದು ಟ್ರಂಪ್ ಹೇಳಿದ್ದಾರೆ.
ಚೀನಾವು ನಮ್ಮ ಉತ್ಪನ್ನಗಳ ಮೇಲೆ ಸರಾಸರಿ ದುಪ್ಪಟ್ಟು ಹಾಗೂ ದಕ್ಷಿಣ ಕೊರಿಯಾವು ಸರಾಸರಿ ನಾಲ್ಕುಪಟ್ಟು ಹೆಚ್ಚು ತೆರಿಗೆ ವಿಧಿಸುತ್ತಿದೆ. ನಾಲ್ಕು ಪಟ್ಟು ಅಂದರೆ ಯೋಚನೆ ಮಾಡಿ. ಆದರೂ ನಾವು ದಕ್ಷಿಣ ಕೊರಿಯಾಗೆ ಮಿಲಿಟರಿ ನೆರವು ಸೇರಿ ಬೇರೆ ರೀತಿಯಲ್ಲಿ ಸಹಾಯ ನೀಡುತ್ತಿದ್ದೇವೆ. ಇದು ಸರಿಯಾದ ವ್ಯವಸ್ಥೆಯಲ್ಲ ಎಂದರು.
ಪ್ರತಿ ತೆರಿಗೆಯು ಏ.2ರಿಂದಲೇ ಜಾರಿಗೆ ಬರಲಿದೆ. ಅವರು ನಮಗೆ ಎಷ್ಟು ತೆರಿಗೆ ಹಾಕುತ್ತಾರೋ ಅವರ ಮೇಲೂ ಅಷ್ಟೇ ತೆರಿಗೆ ಹಾಕುತ್ತೇವೆ. ಒಂದು ವೇಳೆ ಅವರು ಹಣಕಾಸೇತರ ತೆರಿಗೆ ಹಾಕಿ ಅವರ ಮಾರುಕಟ್ಟೆಯಿಂದ ನಮ್ಮನ್ನು ಹೊರಗಿಟ್ಟರೆ, ನಮ್ಮ ಮಾರುಕಟ್ಟೆಯಿಂದ ಅವರನ್ನು ಹೊರಗಿಡಲು ನಾವೂ ಹಣಕಾಸೇತರ ಅಡೆತಡೆಗಳನ್ನು ಸೃಷ್ಟಿಸುತೇವೆ ಎಂದರು

