ಬೆಂಗಳೂರು : ಮತಗಳವು ಆರೋಪ ಸಂಬಂಧ ಸೂಕ್ತ ದಾಖಲೆ ನೀಡುವಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ.
ಮತ್ತೊಂದೆಡೆ ಕರ್ನಾಟಕ ಹರ್ಯಾಣ ಮತ್ತು ಮಹಾರಾಷ್ಟ್ರ ಚುನಾವಣೆಯಲ್ಲಿ ಮತಕಳವಿನ ಕುರಿತ ನಿಮ್ಮ ಆರೋಪ ಸಾಬೀತುಪಡಿಸುವ ದಾಖಲೆ ನೀಡಿ ಇಲ್ಲವೇ ಸುಳ್ಳು ಆರೋಪ ಮಾಡಿದ್ದಕ್ಕೆ ದೇಶದ ಕ್ಷಮೆ ಕೇಳಿ ಎಂದು ರಾಹುಲ್‌ಗೆ ಕೇಂದ್ರ ಚುನಾವಣಾ ಆಯೋಗವು ಎಚ್ಚರಿಕೆ ನೀಡಿದೆ.
ರಾಹುಲ್ ಆರೋಪ :
ಕಳೆದ ಲೋಕಸಭಾ ಚುನಾವಣೆ ವೇಳೆ ಮಹದೇವಪುರ ದಲ್ಲಿ ಶಕುನ್ ರಾಣಿ ಎಂಬುವರು 2 ಬಾರಿ ಮತ ಚಲಾಯಿಸಿದ್ದಾರೆ ಎಂದು ರಾಹುಲ್ ದಿಲ್ಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆರೋಪಿಸಿ ದ್ದರು. ಇದಕ್ಕೆ ಪೂರಕವಾಗಿ ಮತದಾರರ ಪಟ್ಟಿಯಲ್ಲಿ 2 ಕಡೆ ಶಕುನ್ ಹೆಸರಿರುವುದು ಮತ್ತು ಮತ ಚಲಾಯಿಸಿದ ಬಳಿಕ ಮತಗಟ್ಟೆ ಅಧಿಕಾರಿ ಟಿಕ್ ಮಾಡಿರುವ ದಾಖಲೆ ಬಿಡುಗಡೆಗೊಳಿಸಿದ್ದರು.
ಒಮ್ಮೆ ಮಾತ್ರ ಅಕೆ ಮತ ಚಲಾವಣೆ :
ಅ.7ರಂದು ತಾವು ಸುದ್ದಿಗೋಷ್ಠಿಯಲ್ಲಿ ತೋರಿಸಿದ ದಾಖಲೆಗಳು ಚುನಾವಣಾ ಆಯೋಗದಿಂದ ಬಂದಿವೆ ಎಂದು ಹೇಳಿದ್ದೀರಿ. ಇದು ಚುನಾವಣಾ ಆಯೋಗದ ಡೇಟಾ. ಮತಗಟ್ಟೆ ಅಧಿಕಾರಿ ನೀಡಿದ ದಾಖಲೆಗಳ ಪ್ರಕಾರ ಶಕುನ್ ರಾಣಿ ಎರಡು ಬಾರಿ ಮತ ಚಲಾಯಿಸಿದ್ದಾರೆ ಎಂದು ಆರೋಪಿಸಿದ್ದೀರಿ. ಈ ಸಂಬಂಧ ಶಕುನ್ ರಾಣಿ ಅವರನ್ನು ವಿಚಾರಣೆ ಮಾಡಿದಾಗ ಅವರು ಎರಡು ಬಾರಿ ಅಲ್ಲ, ಒಮ್ಮೆ ಮಾತ್ರ ಮತ ಚಲಾಯಿಸಿದ್ದಾಗಿ ಹೇಳಿದ್ದಾರೆ. ನೀವು ತೋರಿಸಿದ ದಾಖಲೆ ಮತಗಟ್ಟೆ ಅಧಿಕಾರಿ ನೀಡಿದ ದಾಖಲೆಯಲ್ಲ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.
ತಮ್ಮ ಬಳಿ ಇರುವ ದಾಖಲೆ ಸಲ್ಲಿಸಿ :
ಶಕುನ್ ಅಥವಾ ಬೇರೆ ಯಾರಾದರೂ ಎರಡು ಬಾರಿ ಮತ ಚಲಾಯಿಸಿದ್ದಲ್ಲಿ ಆ ಸಂಬಂಧ ನಿಮ್ಮ ಬಳಿ ಇರುವ ದಾಖಲೆಗಳನ್ನು ಒದಗಿಸಿ. ಇದರಿಂದ ನಾವು ವಿಸ್ತ್ರತ ವಿಚಾರಣೆ ನಡೆಸಲು ಅನುಕೂಲವಾಗುತ್ತದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಸುಕುಮಾರ್ ಪತ್ರದಲ್ಲಿ ಸೂಚಿಸಿದ್ದಾರೆ.

