ಜೈಪುರ : ಗ್ಯಾಸ್ ಟ್ಯಾಂಕರ್ ಒಂದು ಹಲವು ವಾಹನಗಳಿಗೆ ಡಿಕ್ಕಿ ಹೊಡೆದು ಸ್ಫೋಟಗೊಂಡ ಪರಿಣಾಮ ಭೀಕರ ಅಗ್ನಿ ಅವಘಡ ಸಂಭವಿಸಿದ ಘಟನೆ ಶುಕ್ರವಾರ ರಾಜಸ್ಥಾನದ ಜೈಪುರ-ಆಜ್ಮೇರ್ ಹೆದ್ದಾರಿಯ ಭಂಕ್ರೋಟಾ ಎಂಬಲ್ಲಿ ನಡೆದಿದೆ. ಈ ದುರಂತದಲ್ಲಿ 30 ವಾಹನಗಳು ಹೊತ್ತಿ ಉರಿದಿದ್ದು 11 ಮಂದಿ ಸಾವನ್ನಪ್ಪಿ 35 ಜನ ಗಾಯಗೊಂಡಿದ್ದಾರೆ
ಕೆಲವರು ವಾಹನದೊಳಗೇ ಸುಟ್ಟು ಹೋಗಿರುವ ಶಂಕೆಯಿದ್ದು, ಸಾವು-ನೋವು ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಅಲ್ಲದೆ ಗಾಯಾಳು 35 ಜನರಲ್ಲಿ ಅರ್ಧದಷ್ಟು ಜನರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಸುಮಾರು 25 ಆ್ಯಂಬುಲೆನ್ಸ್ ಗಳಲ್ಲಿ ಎಸ್‌ಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ
ಘಟನೆ ಹೇಗಾಯಿತು? :
ಶುಕ್ರವಾರ ಬೆಳಗ್ಗೆ 5:30ರ ಸುಮಾರಿಗೆ ಜೈಪುರ-ಆಜ್ಮೇರ್ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಎಲ್‌ಪಿಜಿ ಟ್ಯಾಂಕರ್‌ವೊಂದು ಹಲವು ವಾಹನಗಳಿಗೆ ಡಿಕ್ಕಿಯಾಗಿದೆ. ಇದರಿಂದಾಗಿ ಬೆಂಕಿ ಭುಗಿಲೆದ್ದಿದ್ದು, ಎಲ್ಲೆಲ್ಲೂ ದಟ್ಟ ಹೊಗೆ ಆವರಿಸಿಸಿದೆ. ಈ ಘಟನೆ ಸಿಸಿ ಟೀವಿ ದೃಶ್ಯಗಳಲ್ಲಿ ಸೆರೆಯಾಗಿದೆ.ಈ ಬೆಂಕಿ ಹತ್ತಿರದಲ್ಲೇ ಸಾಗುತ್ತಿದ್ದ ಸುಮಾರು 30 ವಾಹನಗಳು ಹಾಗೂ ಹತ್ತಿರದಲ್ಲಿದ್ದ ಮನೆಗಳಿಗೆ ಹಬ್ಬಿದ್ದು, ಆ ವಾಹನಗಳಲ್ಲಿದ್ದ ಹಾಗೂ ಮನೆಗಳಲ್ಲಿದ್ದ ಹಲವರು ಸಜೀವ ದಹನವಾಗಿರುವ ಶಂಕೆಯಿದೆ. ಘಟನೆ ವೇಳೆ ಟ್ಯಾಂಕರ್ ಹಿಂದಿನಿಂದ ಸ್ವೀಪರ್ ಬಸ್ ಒಂದು ಬರುತ್ತಿದ್ದು, ಅದರಲ್ಲಿದ್ದವರ ಮಾಹಿತಿ ಕಲೆ ಹಾಕಲಾಗುತ್ತಿದೆ