ಹೊಸದಿಲ್ಲಿ : ಕ್ಯಾನ್ಸರ್ ಔಷಧಿಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ ದರಗಳನ್ನು ಶೇ.12 ರಿಂದ ಶೇ.3ಕ್ಕೆ ಇಳಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಸೋಮವಾರ 54ನೇ ಜಿಎಸ್ಟಿ ಕೌನ್ಸಿಲ್ ಸಭೆಯ ಮುಕ್ತಾಯದ ನಂತರ ಘೋಷಿಸಿದರು.
ಅಂತೆಯೇ ಖಾರದ ಲಘು ಆಹಾರ ಪದಾರ್ಥಗಳ ಮೇಲಿನ ಜಿಎಸ್ಟಿ ದರಗಳನ್ನು ಸಹ ನಿರೀಕ್ಷಿತವಾಗಿ ಶೇ.18 ರಿಂದ ಶೇ. 12ಕ್ಕೆ ಇಳಿಸಲಾಗಿದೆ. ಈ ಕುರಿತು ಸಚಿವ ಸಮಿತಿಯನ್ನು (ಜಿಒಎಂ) ರಚಿಸಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದ ಜಿಎಸ್ಟಿ ಕೌನ್ಸಿಲ್ ಸೋಮವಾರ ನಿರ್ಧರಿಸಿದೆ. ಈಗಿರುವ ಜಿಎಸ್ಟಿ ದರವನ್ನು ತರ್ಕಬದ್ದಗೊಳಿಸುವ ಸಮಿತಿಯ ನೇತೃತ್ವವನ್ನು ಬಿಹಾರದ ಉಪ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ವಹಿಸಲಿದ್ದಾರೆ. ಈ ಸಮಿತಿ ಪರಿಹಾರ ಸೆಸ್ ಗೆ ಸಂಬಂಧಿ ಸಿದ ಸಮಸ್ಯೆಯನ್ನು ನಿಭಾಯಿಸಲಿದೆ. ಅಕ್ಟೋಬರ್ ಅಂತ್ಯದೊಳಗೆ ತಂಡ ತನ್ನ ವರದಿಯನ್ನು ಸಲ್ಲಿಸಲಿದೆ. ಮಾರ್ಚ್ 2026ಕ್ಕೆ ಇದರ ಅವಧಿ ಮುಗಿಯಲಿದೆ ಎಂದು ಸೀತಾರಾಮನ್ ಹೇಳಿದರು.