ಕುರುಕ್ಷೇತ್ರ : ಹರ್ಯಾಣ ವಿಧಾನಸಭೆ ಚುನಾವಣೆಗೆ ರಣಕಹಳೆ ಮೊಳಗಿಸಿರುವ ಪ್ರಧಾನಿ ನರೇಂದ್ರ ಮೋದಿ, ಅಧಿಕಾರಕ್ಕೆ ಬರಲು ಹವಣಿಸುತ್ತಿರುವ ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡು ಕರ್ನಾಟಕದಲ್ಲಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ವೈಖರಿಯನ್ನು ಹಿಗ್ಗಾಮುಗ್ಗಾ ಟೀಕಿಸಿದ್ದಾರೆ. ‘ತುಷ್ಟಿಕರಣದ ಭರದಲ್ಲಿ ಕರ್ನಾಟಕದಲ್ಲಿ ಗಣೇಶೋತ್ಸವ ಆಚರಣೆಗೂ ಅಡ್ಡಿಪಡಿಸಲಾಗುತ್ತಿದೆ ಎಂದು ಇತ್ತೀಚಿನ ನಾಗಮಂಗಲ ಹಿಂಸೆ ಹಾಗೂ ಬೆಂಗಳೂರಿನ ಪ್ರತಿಭಟನೆ ಘಟನೆಗಳನ್ನು ಉದಾಹರಿಸಿದ್ದಾರೆ.
ಇದೇ ವೇಳೆ ‘ಭ್ರಷ್ಟಾಚಾರ ಎಸಗುತ್ತಿರುವ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ಕರ್ನಾಟಕ ಹಾಗೂ ತೆಲಂಗಾಣ ಮತದಾರರು ಪಶ್ಚಾತ್ತಾಪ ಪಡುತ್ತಿದ್ದಾರೆ’ ಎಂದ ಅವರು ಹರ್ಯಾಣದಲ್ಲಿ ಬೆಂಬಲ ಬೆಲೆ ಕಾಯ್ದೆಗೆ ಆಗ್ರಹಿಸುವ ಕಾಂಗ್ರೆಸ್ ಕರ್ನಾಟಕದಲ್ಲಿ ಎಷ್ಟು ಬೆಳೆಗಳಿಗೆ ಬೆಂಬಲ ಬೆಲೆ ನೀಡಿದೆ ಎಂದು ಪ್ರಶ್ನಿಸಿದ್ದಾರೆ. ಹೀಗಾಗಿ ಕಾಂಗ್ರೆಸ್ಸನ್ನು ಜನ ತಿರಸ್ಕರಿಸಬೇಕು ಎಂದು ಹರ್ಯಾಣದ ಜನರಿಗೆ ಕೋರಿರುವ ಅವರು, ರಾಜ್ಯದಲ್ಲಿ ಬಿಜೆಪಿ ಹ್ಯಾಟ್ರಿಕ್ ಜಯ ಸಾಧಿಸುವುದು ನಿಶ್ಚಿತ ಎಂದಿದ್ದಾರೆ.