ಢಾಕಾ : ಭಾರತದ ನೆರೆಯ ಬಾಂಗ್ಲಾ ದೇಶದಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಹಾಗೂ 300ಕ್ಕೂ ಹೆಚ್ಚು ಜನರ ಬಲಿ ಪಡೆದಿರುವ ‘ಮೀಸಲಾತಿ ವಿರೋಧಿ ಹಿಂಸಾತ್ಮಕ ಹೋರಾಟ’ ಸೋಮವಾರ ಕಂಡು ಕೇಳರಿಯದಷ್ಟು ತಿರುವು ಪಡೆದಿದೆ. ದಂಗೆಕೋರರು ಹಾಗೂ ಸೇನೆಯ ’45 ನಿಮಿಷದ ಗಡುವಿಗೆ’ ಬೆಚ್ಚಿ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿದ್ದಾರೆ ಹಾಗೂ ದೇಶದಿಂದ ಪಲಾಯನಗೈದಿದ್ದಾರೆ. ಸೋಮವಾರ ಸಂಜೆ ಅವರು ದಿಲ್ಲಿಯ ಹಿಂಡನ್ ವಿರ್‌ಬೇಸ್‌ಗೆ ಆಗಮಿಸಿದ್ದು ಅಲ್ಲಿಂದ ಲಂಡನ್‌ಗೆ ತೆರಳುವ ಸಾಧ್ಯತೆ ಇದೆ ಗೊತ್ತಾಗಿದೆ
ಸೋಮವಾರ ಮಧ್ಯಾಹ್ನ ಪ್ರತಿಭಟನಾಕಾರರು ಪ್ರಧಾನಿ ಹಸೀನಾರ ಢಾಕಾ ನಿವಾಸಕ್ಕೆ ನುಗ್ಗತೊಡಗಿದರು. ಇದೇ ವೇಳೆ ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಬಾಂಗ್ಲಾದೇಶಿ ಸೇನೆ ಅಧಿಕಾರದಿಂದ ಕೆಳಗಿಳಿಯಲು ಅವರಿಗೆ 45 ನಿಮಿಷಗಳ ಕಾಲಾವಕಾಶ ನೀಡಿತು. ಹೀಗಾಗಿ ಇನ್ನು ತಮ್ಮ ಅಧಿಕಾರ ನಡೆಯದು ಎಂದು ಅರಿತ ಹಸೀನಾ, ರಾಜೀನಾಮೆ ಸಲ್ಲಿಸಿ ಸೇನಾ ವಿಮಾನದಲ್ಲಿ ದೇಶ ತೊರೆದಿದ್ದಾರೆ