ಹೊಸದಿಲ್ಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಶೇ.96 ರಷ್ಟು ಮುಸ್ಲಿಂ ಬಾಹುಳ್ಯ ಹೊಂದಿರುವ ತಜಕಿಸ್ತಾನದಲ್ಲಿ ಹಿಜಾಬ್ ಅನ್ನು ಅಧಿಕೃತವಾಗಿ ನಿಷೇಧಿಸಲಾಗಿದೆ. ಇದನ್ನು ವಿದೇಶಿ ಉಡುಪು ಎಂದು ಕರೆದಿರುವ ಅಲ್ಲಿನ ಸರ್ಕಾರ, ನಿಯಮ ಉಲ್ಲಂಘಿಸಿ ಧರಿಸಿದರೆ ಭಾರಿ ಮೊತ್ತದ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿದೆ.
ಅಷ್ಟೇ ಅಲ್ಲ, ಇಲ್ಲಿನ ಎಮೋಮಾಲಿ ರೆಹಮಾನ್ ಆಡಳಿತವು ಈದ್ ಪದ್ದತಿ ಮೇಲೂ ಕೆಲವೊಂದು ಷರತ್ತುಗಳನ್ನು ಹಾಕಿದೆ. ತಜಕಿಸ್ತಾನ ಆಡಳಿತದ ಪ್ರಕಾರ, ಹಿಜಾಬ್ ವಿದೇಶಿ ಉಡುಪು. ಜತೆಗೆ ಈದ್ ಹಬ್ಬದ ಸಮಯದಲ್ಲಿ ಮಕ್ಕಳು ಹಣ ಕೇಳುವ ಪದ್ಧತಿಯನ್ನೂ ನಿಷೇಧಿಸಲಾಗಿದೆ.
ತಮ್ಮ ರಾಷ್ಟ್ರದಲ್ಲಿ ಜಾತ್ಯತೀತ ರಾಷ್ಟ್ರೀಯ ಗುರುತನ್ನು ಉತ್ತೇಜಿಸುವ ಸಲುವಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅಲ್ಲಿನ ಸರ್ಕಾರ ಹೇಳಿದೆ. ಈ ಸಂಬಂಧ ಮಸೂದೆಗೆ ಸರ್ಕಾರ ಅನುಮೋದನೆ ನೀಡಿದೆ. ತಜಕಿಸ್ತಾನದಲ್ಲಿ 1 ಕೋಟಿ ಮುಸ್ಲಿಮರಿದ್ದಾರೆ. ಇದು ಇಸ್ಲಾಂನ ವಿವಿಧ ಪಂಥಗಳನ್ನು ಅನುಸರಿಸುತ್ತದೆ.