ಹೊಸದಿಲ್ಲಿ : ಆ್ಯಪಲ್ ಐಫೋನ್ ತಯಾರಿಕೆಯಲ್ಲಿ ಭಾರತ ಮಹತ್ವದ ಸಾಧನೆಗೈದಿದ್ದು, ಚೀನಾವನ್ನು ಹಿಂದಿಕ್ಕಿ ಅಮೆರಿಕಕ್ಕೆ ಅತಿದೊಡ್ಡ ಐಫೋನ್ ರಫ್ತುದಾರ ರಾಷ್ಟ್ರ ಎಂಬ ಕೀರ್ತಿಗೆ ಭಾಜನವಾಗಿದೆ. ಈ ಬಗ್ಗೆ ಮಾರುಕಟ್ಟೆ ಸಂಶೋಧನಾ ಸಂಸ್ಥೆ ಓಮ್ಮಿಯಾ ವರದಿ ಮಾಡಿದ್ದು, ಭಾರತವು ಐಫೋನ್ ತಯಾರಿಕೆಯಲ್ಲಿ ಚೀನಾವನ್ನು ಹಿಂದಿಕ್ಕಿ ಅಮೆರಿಕಕ್ಕೆ ಅತಿದೊಡ್ಡ ಐಫೋನ್ ರಫ್ತುದಾರ ರಾಷ್ಟ್ರವಾಗಿದೆ.
ಏಪ್ರಿಲ್‌ನಲ್ಲಿ ಭಾರತದಲ್ಲಿ ತಯಾರಾದ ಸುಮಾರು 30 ಲಕ್ಷ ಐಫೋನ್‌ಗಳನ್ನು ಅಮೆರಿಕಕ್ಕೆ ಕಳುಹಿಸಲಾಗಿದೆ. ಇತ್ತೀಚಿನ ಅಂದಾಜಿನ ಪ್ರಕಾರ ಚೀನಾದಿಂದ ಫೋನ್ ಸಾಗಣೆ ಪ್ರಮಾಣವೀಗ ಶೇ.76ರಷ್ಟು ಕುಸಿದು ಕೇವಲ 900,000 ಯೂನಿಟ್‌ಗಳಿಗೆ ತಲುಪಿವೆ ಎಂದು ವರದಿ ಹೇಳಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆ್ಯಪಲ್ ಸಂಸ್ಥೆಯ ಮುಖ್ಯಸ್ಥ ಟಿಮ್ ಕುಕ್ ಅವರನ್ನು ಉದ್ದೇಶಿಸಿ, ಅಮೆರಿಕಕ್ಕಾಗಿ ಐಫೋನ್ ಗಳನ್ನು ತಯಾರಿಸಲು ಭಾರತದಲ್ಲಿ ಘಟಕಗಳನ್ನು ನಿರ್ಮಿಸುವುದನ್ನು ನಿಲ್ಲಿಸುವಂತೆ ಕೇಳಿದ್ದರು. ಅಲ್ಲದೆ ದೇಶದಲ್ಲಿ ಆಮದು ಮಾಡಿಕೊಳ್ಳುವ ಐಫೋನ್‌ಗಳ ಮೇಲೆ ಶೇ.25ಸುಂಕ ವಿಧಿಸುವುದಾಗಿ ಎಚ್ಚರಿಸಿದ ನಂತರವೂ ಆ್ಯಪಲ್ ಗಮನಾರ್ಹ ಸವಾಲನ್ನು ಎದುರಿಸುತ್ತಿರುವ ಸಮಯದಲ್ಲಿ ಈ ಬೆಳವಣಿಗೆ ಗಮನ ಸೆಳೆದಿದೆ.

