ಭೂಪಾಲ್ : ಭಯೋತ್ಪಾದಕರ ಮೋಸದ ಸಮರಕ್ಕೆಇನ್ನು ಅವಕಾಶವಿಲ್ಲ, ನಿಮ್ಮ ಗುಂಡುಗಳಿಗೆ ಪ್ರತಿಯಾಗಿ ಪಿರಂಗಿ ಗುಂಡುಗಳ ಮಳೆ ಸುರಿಸುತ್ತೇವೆ ಎಂದು ಪ್ರಧಾನಿ ಮೋದಿ ಎಚ್ಚರಿಸಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ದಿಟ್ಟ ಪ್ರತಿಕ್ರಿಯೆಯಾಗಿ ನಡೆಸಲಾದ ಆಪರೇಶನ್ ಸಿಂದೂರ್ ಶೌರ್ಯ ಪರಾಕ್ರಮಗಳ ದ್ಯೋತಕವಾಗಿದೆ ಮತ್ತು ದೇಶದ ಚರಿತ್ರೆಯಲ್ಲೇ ಅತ್ಯಂತ ಯಶಸ್ವೀ ಮತ್ತು ಬೃಹತ್ ಭಯೋತ್ಪಾದನೆ ವಿರೋಧಿ ಕಾರ್ಯಾಚರಣೆಯಾಗಿದೆ ಎಂದು ಮೋದಿ ಪ್ರಶಂಸಿಸಿದ್ದಾರೆ.
ಅಹಲ್ಯಾಬಾಯಿ ಹೋಳ್ಳರ್ ಅವರ 300ನೇ ಜನುಮ ವರ್ಧಂತಿ ಪ್ರಯುಕ್ತ ಇಲ್ಲಿ ನಡೆದ ಲೋಕಮಾತಾ ದೇವಿ ಅಹಲ್ಯಾಬಾಯಿ ಮಹಿಳಾ ಸಶಕ್ತಿಕರಣ ಮಹಾ ಸಮ್ಮೇಳನದಲ್ಲಿ ಮಾತನಾಡಿದ ಮೋದಿ, ಪಹಲ್ಲಾಮ್‌ನಲ್ಲಿ ಪಾತಕಿ ಭಯೋತ್ಪಾದಕರು ಭಾರತೀಯರ ರಕ್ತಪಾತ ಮಾಡಿದ್ದು ಮಾತ್ರವಲ್ಲ ನಮ್ಮ ಸಂಸ್ಕೃತಿ ಮೇಲೆ ದಾಳಿ ಮಾಡಿದರು. ಅವರು ನಮ್ಮ ಸಮಾಜ ಒಡೆಯಲು ಯತ್ನಿಸಿದರು. ಪ್ರಮುಖವಾಗಿ . ಅವರು ಭಾರತದ ನಾರೀಶಕ್ತಿಗೆ ಸವಾಲೆಸೆದರು. ಈ ಸವಾಲು ಪಾತಕಿಗಳು ಮತ್ತವರ ಪ್ರಚೋದಕರ ಪಾಲಿಗೇ ಮರಣ ಗಂಟೆಯಾಯಿತು. ಪಾಕ್ ಸೇನೆಯ ಕಲ್ಪನೆಗೂ ನಿಲುಕದ ರೀತಿ ನಮ್ಮ ಸೇನೆ ಭಯೋತ್ಪಾದಕರ ನೆಲೆಗಳನ್ನು ಸಂಪೂರ್ಣವಾಗಿ ನೆಲಸಮಗೈದಿತು ಎಂದರು.

