ಲಂಡನ್ : ಬ್ರಿಟನ್‌ಗೆ ಭಾರತೀಯ ರಪ್ಪಿಗೆ ಶೇ.99ರಷ್ಟು ಸುಂಕ ಮುಕ್ತ ಪ್ರವೇಶವನ್ನು ಖಾತ್ರಿಗೊಳಿಸುವ, ಭಾರತ-ಬ್ರಿಟನ್ ನಡುವೆ ವಾರ್ಷಿಕ 34 ಬಿಲಿಯನ್ ಡಾಲರ್‌ಗಳ ವ್ಯಾಪಾರ-ವ್ಯವಹಾರಕ್ಕೆ ಉತ್ತೇಜನ ನೀಡುವ ಅತ್ಯಂತ ಮಹತ್ತ್ವದ ಮುಕ್ತ ವ್ಯಾಪಾರ ಒಪ್ಪಂದಕ್ಕೆ (ಎಫ್ ಟಿ ಎ) ಭಾರತ-ಬ್ರಿಟನ್ ಗುರುವಾರ ಸಹಿ ಹಾಕಿವೆ.
ಇದರಿಂದ ಭಾರತದ 75000ಕ್ಕೂ ಅಧಿಕ ಉದ್ಯೋಗಿಗಳಿಗೆ ಮತ್ತು 900ಕ್ಕೂ ಅಧಿಕ ಉದ್ಯೋಗದಾತರಿಗೆ ಪ್ರಯೋಜನವಾಗಲಿದೆ. ಒಪ್ಪಂದದಲ್ಲಿ ಬ್ರಿಟನ್‌ನ ವಿಸ್ಕಿ, ಕಾರುಗಳ ಸಹಿತ ವಿವಿಧ ವಸ್ತುಗಳ ಮೇಲಿನ ಆಮದು ಸುಂಕ ಕೂಡ ಕುಗ್ಗಲಿದೆ ಅಥವಾ ವಿನಾಯಿತಿ ಹೊಂದಲಿವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಬ್ರಿಟನ್ ಪ್ರಧಾನಿ ಕೇರ್ ಸ್ಟಾರ್ಮರ್ ಸಮಕ್ಷಮ ಭಾರತದ ವಾಣಿಜ್ಯ ಸಚಿವ ಪಿಯುಶ್ ಗೋಯಲ್ ಮತ್ತು ಬ್ರಿಟನ್ ವಾಣಿಜ್ಯ ಸಚಿವ ಜೋನಾಥನ್ ರೆನಾಲ್ಡ್ ಒಪ್ಪಂದಕ್ಕೆ ಸಹಿ ಹಾಕಿದರು.
ಎಫ್‌ಟಿಎನಿಂದಾಗಿ ಭಾರತದ ಶೇ.99ರಷ್ಟು ರಫ್ತುಗಳ ಮೇಲೆ ಸುಂಕ ವಿನಾಯಿತಿ ಸಿಗಲಿದೆ. ಏಕಕಾಲಕ್ಕೆ ಕಾರು, ವಿಸ್ಕಿ ಮತ್ತಿತರ ಉತ್ಪನ್ನಗಳನ್ನು ಭಾರತಕ್ಕೆ ಸುಗಮವಾಗಿ ರಫ್ತು ಮಾಡಲು ಬ್ರಿಟನ್‌ಗೂ ಸಾಧ್ಯವಾಗಲಿದೆ ಎಂದು ಭಾರತೀಯ ಅಧಿಕಾರಿಗಳು ತಿಳಿಸಿದ್ದಾರೆ.

