ಕಝಾನ್ : ಲಡಾಖ್ ವಲಯದಲ್ಲಿನ ಸಂಘರ್ಷದ ವಾತಾವರಣ ತಿಳಿಗೊಳಿಸುವ ಸಲುವಾಗಿ ಇತ್ತೀಚೆಗೆ ನಡೆದ ಶಾಂತಿ ಮಾತುಕತೆಯನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ವಿಸ್ತರಿಸಲು ಭಾರತ ಮತ್ತು ಚೀನಾ ಸಮ್ಮತಿಸಿವೆ. ರಷ್ಯಾದ ಕಝಾನ್‌ನಲ್ಲಿ ನಡೆಯುತ್ತಿರುವ ಬ್ರಿಕ್ಸ್ ದೇಶಗಳ ಶೃಂಗ ಸಭೆ ವೇಳೆ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಡುವೆ ಬುಧವಾರ ನಡೆದ ಮಹತ್ವದ ದ್ವಿಪಕ್ಷೀಯ ಮಾತುಕತೆ ವೇಳೆ ಇಂಥದ್ದೊಂದು ನಿರ್ಧಾರಕ್ಕೆ ಬರಲಾಗಿದೆ.
ಬುಧವಾರದ ಮಾತುಕತೆ ವೇಳೆ ಉಭಯ ನಾಯಕರು, ಎರಡೂ ದೇಶಗಳ ನಡುವೆ ಶಾಂತಿಯುತ ಹಾಗೂ ಸ್ಥಿರ ಸಂಬಂಧ ಸ್ಥಾಪಿಸುವ ಕುರಿತು ಸಮ್ಮತಿ ವ್ಯಕ್ತಪಡಿಸಿದ್ದಾರೆ. ಜೊತೆಗೆ ಪ್ರಬುದ್ಧತೆ, ಪರಸ್ಪರರ ಗೌರವಿಸುವ ಮೂಲಕ ಭಾರತ ಮತ್ತು ಚೀನಾ ಶಾಂತಿಯುತ, ಸ್ಥಿರ ಸಂಬಂಧವನ್ನು ಹೊಂದಬಹುದು ಎಂಬ ನಿಲುವನ್ನು ಎರಡೂ ದೇಶ ವ್ಯಕ್ತಪಡಿಸಿವೆ.
2020ರಲ್ಲಿ ಲಡಾಖ್‌ನಲ್ಲಿ ಉಭಯ ದೇಶಗಳ ನಡುವೆ ಉಂಟಾದ ಉದ್ವಿಗ್ನ ಪರಿಸ್ಥಿತಿಯ ಬಳಿಕ ಇದು ಭಾರತ ಮತ್ತು ಚೀನಾ ನಡುವೆ ನಡೆದ ಮೊದಲ ದ್ವಿಪಕ್ಷೀಯ ಮಾತುಕತೆ ಎಂಬುದು ಗಮನಾರ್ಹ.