ನವದೆಹಲಿ : ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಮತ್ತು ಸೈನಿಕರನ್ನು ಪೂರೈಸಿ ದ್ರೋಹವೆಸಗಿದ್ದ ಟರ್ಕಿಗೆ ಭಾರತ ಮೊದಲ ದೊಡ್ಡ ಪೆಟ್ಟು ನೀಡಿದ್ದು, ದೇಶದ 9 ವಿಮಾನ ನಿಲ್ದಾಣಗಳಲ್ಲಿ ಸೇವೆ ಒದಗಿಸುತ್ತಿದ್ದ ಟರ್ಕಿ ಮೂಲದ ಕಂಪನಿಯ ಭದ್ರತಾ ಪರವಾನಗಿ ರದ್ದು ಮಾಡಿದೆ
ಟರ್ಕಿ ಮೂಲದ ಸೆಲೆಬಿ ಕಂಪನಿಯು ಬ್ರಿಡ್ಜ್ ಮೌಂಟೆಡ್ ಸಲಕರಣೆಗಳ ಸ್ಥಾಪನೆ, ಸರಕು ನಿರ್ವಹಣೆ ಸೇರಿದಂತೆ ಗ್ರೌಂಡ್ ಹ್ಯಾಂಡಲಿಂಗ್ ಸೇವೆಯನ್ನು ಬೆಂಗಳೂರು, ದೆಹಲಿ, ಮುಂಬೈ, ಕೊಚ್ಚಿ ಸೇರಿದಂತೆ ಭಾರತದ 9 ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಒದಗಿಸುತ್ತಿದೆ.
ಪಾಕ್‌ಗೆ ಟರ್ಕಿ ಬೆಂಬಲ ನೀಡಿರುವುದು ಬಯಲಾದ ಬೆನ್ನಲ್ಲೇ ಈ ಕಂಪನಿಯ ಭದ್ರತಾ ಅನುಮತಿಯನ್ನು ನಾಗರಿಕ ವಿಮಾನಯಾನ ಸಚಿವಾಲಯ ತಕ್ಷಣದಿಂದ ಜಾರಿಗೆ ಬರುವಂತೆ ಭದ್ರತಾ ಕಾರಣ ನೀಡಿ ರದ್ದುಪಡಿಸಿದೆ
ಟರ್ಕಿಯಿಂದ ಪಾಕಿಸ್ತಾನಕ್ಕೆ ಬೆಂಬಲ ವಿಚಾರ ಬಯಲಾದ ಬಳಿಕ ‘ಬಾಯ್ಕಾಟ್ ಅಭಿಯಾನವನ್ನು ಭಾರತೀಯರು ದೊಡ್ಡದಾಗಿ ಆರಂಭಿಸಿದ್ದರು. ಒಣಹಣ್ಣು, ಸೇಬು, ಅಮೃತಶಿಲೆ ಆಮದು ರದ್ದು, ಟರ್ಕಿ ಪ್ರವಾಸೋದ್ಯಮ ಬಹಿಷ್ಕಾರ ಜೊತೆಗೆ ದೆಹಲಿಯ ಜೆಎನ್‌ಯು ಒಪ್ಪಂದವೂ ರದ್ದಾಗಿತ್ತು. ಮಾತ್ರವಲ್ಲದೇ ಟರ್ಕಿ ದೇಶದ ಎಕ್ಸ್ ಖಾತೆಯೊಂದಕ್ಕೂ ನಿರ್ಬಂಧ ವಿಧಿಸಿ ಭಾರತ ದೊಡ್ಡ ಹೊಡೆತ ನೀಡಿದೆ

