ಲಂಡನ್ : ಇದೇ ಮೊತ್ತ ಮೊದಲ ಬಾರಿಗೆ ಕನ್ನಡ ಕೃತಿಯೊಂದಕ್ಕೆ ಇಂಟರ್‌ನ್ಯಾಷನಲ್ ಬುಕರ್ ಪ್ರಶಸ್ತಿ ಒಲಿದು ಬಂದಿದೆ ಕನ್ನಡದ ಖ್ಯಾತ ಲೇಖಕಿ,ವಕೀಲೆ ಬಾನು ಮುಸ್ತಾಕ್ ಅವರು ಕನ್ನಡದಲ್ಲಿ ಬರೆದಿದ್ದ ‘ಎದೆಯ ಹಣತೆ’ ಹಾಗೂ ಇನ್ನೊಬ್ಬ ಕನ್ನಡದ ಲೇಖಕಿ ದೀಪಾ ಭಾಸ್ತಿ ಅವರಿಂದ ಆಂಗ್ಲ ಭಾಷೆಗೆ ತರ್ಜುಮೆಗೊಂಡ ಸಣ್ಣ ಕತೆಗಳ ಸಂಗ್ರಹ ‘ಹಾರ್ಟ್ ಲ್ಯಾಂಪ್’ಗೆ ಈ ಪ್ರತಿಷ್ಠಿತ ಪ್ರಶಸ್ತಿ ಬಂದಿದೆ.
ವರ್ಷದ ಅತ್ಯುತ್ತಮ ಕೃತಿಗೆ ನೀಡಲಾಗುವ ಈ ಪ್ರಶಸ್ತಿಯನ್ನು ಇಬ್ಬರಿಗೂ ಮಂಗಳವಾರ ಲಂಡನ್‌ನಲ್ಲಿ ಪ್ರದಾನ ಮಾಡಲಾಯಿತು. ಅಂತಿಮ ಸ್ಪರ್ಧೆಯಲ್ಲಿದ್ದ 6 ಕೃತಿಗಳ ಪೈಕಿ ಹಾರ್ಟ್ ಲ್ಯಾಂಪ್ ಪರಿಗಣಿಸಲ್ಪಟ್ಟಿದೆ
ಕುಟುಂಬ ಮತ್ತು ಸಮುದಾಯಗಳ ಉದ್ವಿಗ್ನತೆಯನ್ನು ಸೆರೆಹಿಡಿಯುವ ಚಮತ್ಕಾರಿ, ಎದ್ದುಕಾಣುವ, ಆಡುಮಾತಿನಲ್ಲಿರುವ, ಹೃದಯಸ್ಪರ್ಶಿ ಮತ್ತು ರೋಮಾಂಚಕ ಶೈಲಿಗೆ ಪ್ರಶಸ್ತಿ ಲಭಿಸಿದೆ. ಕೃತಿಯನ್ನು ಇಂಗ್ಲಿಷ್‌ಗೆ ಅನುವಾದಿಸಿದ ದೀಪಾ ಭಸ್ತಿ ಅವರೊಂದಿಗೆ ಮುಸ್ತಾಕ್ ಪ್ರಶಸ್ತಿ ಹಾಗೂ 57 ಲಕ್ಷ ರು. ನಗದು ಬಹುಮಾನ ಸ್ವೀಕರಿಸಿದರು.
ಪ್ರಶಸ್ತಿ ಪಡೆದು ಮಾತನಾಡಿದ ಮುಪ್ತಾಕ್, ಎಲ್ಲಾ ಕತೆಗಳು ಮಾನವನ ಅನುಭವದ ಆಧಾರದಲ್ಲಿ ರಚನೆಯಾಗುವ ಕಾರಣ, ಯಾವ ಕಥೆಯೂ ಚಿಕ್ಕದಲ್ಲ ಎಂಬ ನಂಬಿಕೆಯಿಂದ ಈ ಪುಸ್ತಕ ಹುಟ್ಟಿದೆ. ನಮ್ಮನ್ನು ವಿಭಜಿಸಲು ಯತ್ನಿಸುವ ಈ ಜಗತ್ತಿನಲ್ಲಿ, ಕೆಲ ಪುಟಗಳಲ್ಲಾದರೂ ನಾವು ಸಾಹಿತ್ಯದ ಮೂಲಕ ಪರಸ್ಪರರ ಮನಸ್ಸಿನಲ್ಲಿ ನೆಲೆಸಬಹುದು’ ಎಂದು ಹೇಳಿದರು.ಭಸ್ತಿ ಮಾತನಾಡಿ, ‘ನನ್ನ ಸುಂದರ ಭಾಷೆಗೆ ಇದೆಂತಹ ಅದ್ಭುತ ಗೆಲುವು’ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

