ಕೈರೋ : ಕಳೆದ 15 ತಿಂಗಳಲ್ಲಿ 50,000ಕ್ಕೂ ಹೆಚ್ಚು ಜನರ ಬಲಿ ಪಡೆದ, 1 ಲಕ್ಷಕ್ಕೂ ಹೆಚ್ಚು ಜನರನ್ನು ಗಾಯಾಳುಗಳಾಗಿ ಮಾಡಿದ್ದ ಕದನಕ್ಕೆ ತಾತ್ಕಾಲಿಕ ವಿರಾಮ ಹೇಳಲು ಕೊನೆಗೂ ಇಸ್ರೇಲ್, ಹಮಾಸ್ ಉಗ್ರರು ಸಮ್ಮತಿಸಿದ್ದಾರೆ. ಹೀಗಾಗಿ ಶೀಘ್ರ ಯುದ್ದಕ್ಕೆ ತೆರೆ ಬೀಳುವ ವಿಶ್ವಾಸ ವ್ಯಕ್ತವಾಗಿದೆ.
ಕದನ ವಿರಾಮ ಘೋಷಣೆ ಸಂಬಂಧ ಅರಬ್ ದೇಶಗಳು ಮತ್ತು ಅಮೆರಿಕದ ಪ್ರತಿನಿಧಿಗಳು ಕತಾರ್‌ನಲ್ಲಿ ಹಲವು ದಿನಗಳಿಂದ ನಡೆಸಿದ ಸಂಧಾನ ಫಲಿಸಿದ್ದು, ಕದನ ವಿರಾಮದ ಅಂಶಗಳಿಗೆ ಇಸ್ರೇಲ್ ಮತ್ತು ಹಮಾಸ್ ಎರಡೂ ಕಡೆಯಿಂದ ಸಮ್ಮತಿ ವ್ಯಕ್ತವಾಗಿದೆ. ಈ ಸಂಧಾನದ ಪ್ರಸ್ತಾಪಕ್ಕೆ ಇಸ್ರೇಲ್ ಸಚಿವ ಸಂಪುಟ ಅನುಮೋದನೆ ನೀಡಿದ ಬಳಿಕ ಜಾರಿಯಾಗಲಿದೆ.
ಒಪ್ಪಂದದ ಅನ್ವಯ ಎರಡೂ ಗುಂಪುಗಳು ಪರಸ್ಪರರ ಮೇಲಿನ ದಾಳಿ ನಿಲ್ಲಿಸಲಿವೆ. ಜೊತೆಗೆ ಹಮಾಸ್ ಉಗ್ರರು ತಾವು ಒತ್ತೆ ಇಟ್ಟು ಕೊಂಡಿರುವ ಇಸ್ರೇಲ್ ಸೇರಿದಂತೆ ವಿವಿಧ ದೇಶಗಳ ಪ್ರಜೆಗಳನ್ನು ಬಿಡುಗಡೆ ಮಾಡಲಿದ್ದಾರೆ. ಜೊತೆಗೆ ಕದನ ವಿರಾಮದ ಅವಧಿ ಸದ್ಯಕ್ಕೆ 6 ವಾರಗಳಿಗೆ ಸೀಮಿತವಾಗಿದ್ದು, ಈ ಅವಧಿಯಲ್ಲಿ ಒಪ್ಪಂದ ಅಂಶಗಳನ್ನು ಎರಡೂ ಬಣಗಳು ಪಾಲಿಸಿದರೆ ಯುದ್ಧ ಸ್ಥಗಿತದ ಕುರಿತು ಮಾತುಕತೆಗಳು ಕೂಡಾ ನಡೆಯಲಿವೆ.