ಹೊಸದಿಲ್ಲಿ: ಕೇಂದ್ರ ಆರೋಗ್ಯ ಸಚಿವ ಹಾಗೂ ಬಿಜೆಪಿಯ ಹಿರಿಯ ನಾಯಕ ಜೆ.ಪಿ.ನಡ್ಡಾ ರಾಜ್ಯಸಭೆಯ ಸಭಾ ನಾಯಕರಾಗಿ ಸೋಮವಾರ ಆಯ್ಕೆಯಾದರು. ಮೋದಿಯವರು ಎರಡನೇ ಅವಧಿಗೆ ಪ್ರಧಾನಿಯಾಗಿದ್ದಾಗ ಪೀಯೂಷ್ ಗೋಯಲ್ ಸಭಾ ನಾಯಕರಾಗಿದ್ದರು. ಇದೀಗ ಈ ಸ್ಥಾನವನ್ನು ನಡ್ಡಾ ಅಲಂಕರಿಸಿದ್ದಾರೆ.
ರಾಜ್ಯಸಭೆಯ ಸಭಾ ನಾಯಕರಾದಲ್ಲಿ ನಡ್ಡಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಗಾದಿ ತೊರೆಯುವರೆಂಬ ಸುದ್ದಿಯಿತ್ತು. ಆದರೆ ಪ್ರಸಕ್ತ ಸನ್ನಿವೇಶದಲ್ಲಿ ಪ್ರಸ್ತುತ ಹುದ್ದೆಯಲ್ಲಿ ನಡ್ಡಾ ಮುಂದುವರಿಯುವ ಸಾಧ್ಯತೆಗಳೇ ಬಲವಾಗಿವೆ. ಪಕ್ಷದ ನಿಯಮ ಪ್ರಕಾರ, ಎಲ್ಲಾ ರಾಜ್ಯಗಳಲ್ಲಿ ಸಂಘಟನಾತ್ಮಕ ಚುನಾವಣೆಗಳು ಶೇ.50ರಷ್ಟು ಮುಗಿದ ನಂತರವೇ ಪಕ್ಷದ ರಾಷ್ಟ್ರಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯುವುದು.