ತಿರುವನಂತಪುರ : ಜಿ7 ಶೃಂಗಸಭೆ ಸಂದರ್ಭ ಪ್ರಧಾವಿ ನರೇಂದ್ರ ಮೋದಿ ಪೋಪ್ ಫ್ರಾನ್ಸಿಸ್ ಭೇಟಿಯನ್ನು ಅಣಕಿಸಿ, ಎಕ್ಸ್‌ಗೆ ಪೋಸ್ಟ್ ಹಾಕಿದ್ದ ಕೇರಳ ಕಾಂಗ್ರೆಸ್ ನಡೆಗೆ ದೇಶಾದ್ಯಂತ ಕ್ರೈಸ್ತ ಸಮುದಾಯ ಮತ್ತು ಬಿಜೆಪಿಯಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ ಇದರ ಬೆನ್ನಲ್ಲೇ ಕಾಂಗ್ರೆಸ್ ಪ್ರಸ್ತುತ ಪೋಸ್ಟ್‌ನ್ನು ಅಳಿಸಿ ಹಾಕಿ, ಕ್ಷಮೆಯಾಚಿಸಿದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಪೋಪ್ ಫ್ರಾನ್ಸಿಸ್ ಇಟಲಿಯಲ್ಲಿ ಭೇಟಿಯಾದ ಫೋಟೋವನ್ನು ‘ಕೊನೆಗೂ ಪೋಪರಿಗೆ ದೇವರನ್ನು ಭೇಟಿಯಾಗುವ ಅವಕಾಶ ದೊರೆಯಿತು’ ಎಂಬ ಕುಹಕ ಶೀರ್ಷಿಕೆಯೊಂದಿಗೆ ಕೇರಳ ಕಾಂಗ್ರೆಸ್ ನಾಯಕರು ಎಕ್ಸ್ ಗೆ ಪೋಸ್ಟ್ ಮಾಡಿದ್ದರು.
ತಾನು ಭಗವಾನ್ ಜಗನ್ನಾಥನ ಮಗ, ನಿರ್ದಿಷ್ಟ ಸಿದ್ದಾಂತದ ಸಾಕಾರಕ್ಕಾಗಿ ಭಗವಂತನೇ ನನ್ನನ್ನು ಈ ಭೂಮಿಗೆ ಕಳುಹಿಸಿದ್ದಾನೆಂದು ಪ್ರಧಾನಿ ಮೋದಿ ಲೋಕಸಭಾ ಚುನಾವಣಾ ರ್ಯಾಲಿಯೊಂದರಲ್ಲಿ ಹೇಳಿದ್ದರು. ಇದನ್ನೇ ಕೇರಳ ಕಾಂಗ್ರೆಸಿಗರು ತಮ್ಮ ಕುಹಕ, ಕುಟಿಲ ನಡೆಗೆ ಬಳಸಿಕೊಂಡು ಪ್ರಧಾನಿ ಮೋದಿ ಮತ್ತು ಪೋಪ್ ಫ್ರಾನ್ಸಿಸ್ ರನ್ನು ಅಣಕಿಸಿದ್ದರು.