ಹೊಸದಿಲ್ಲಿ : ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಂತ್ಯಕ್ರಿಯೆ ಶನಿವಾರ ಭಾರತ ಮತ್ತು ವಿದೇಶಗಳ ಗಣ್ಯರ ಸಮ್ಮುಖದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಿತು.
ರಾಜಧಾನಿಯ ಕಶೀರ್ ಗೇಟ್ನಲ್ಲಿರುವ ನಿಗಮ್ ಬೋಧ ಘಾಟ್ನಲ್ಲಿ ಸಿಂಗ್ ಅವರ ಚಿತೆಗೆ ಅವರ ಹಿರಿಯ ಪುತ್ರಿ ಉಪಿಂದರ್ ಸಿಂಗ್ ಅವರು ಅಗ್ನಿ ಸ್ಪರ್ಶ ನೀಡುವುದರೊಂದಿಗೆ ಸಿಖ್ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿತು. ಇದಕ್ಕೂ ಮೊದಲು ಮೋತಿಲಾಲ್ ಮಾರ್ಗದಲ್ಲಿರುವ ಮನಮೋಹನ್ ಸಿಂಗ್ ಅವರ ನಿವಾಸದಿಂದ ಪಾರ್ಥಿವ ಶರೀರವನ್ನು ಬಿಗಿಭದ್ರತೆಯಲ್ಲಿ ಎಐಸಿಸಿ ಕೇಂದ್ರ ಕಚೇರಿಗೆ ತರಲಾಯಿತು. ಸಿಖ್ ಸಮುದಾಯದ ಧಾರ್ಮಿಕ ಮುಖಂಡರು ಮತ್ತು ಡಾ.ಮನಮೋಹನ್ ಸಿಂಗ್ ಅವರ ಕುಟುಂಬ ಸದಸ್ಯರು ಅಂತಿಮ ವಿಧಿವಿಧಾನ ನೆರವೇರಿಸಿದರು
ರಾಷ್ಟ್ರಪತಿ ಬ್ರೌಪದಿ ಮುರ್ಮು ಉಪರಾಷ್ಟ್ರಪತಿ ಜಗದೀಪ್ ಧನ್ವರ್, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಹಿರಿಯ ನಾಯಕಿ, ಸೋನಿಯಾ ಗಾಂಧಿ ವಿಪಕ್ಷ ನಾಯಕ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್, ಸಂಸದೆ ಪ್ರಿಯಾಂಕಾ ವಾದ್ರಾ ಸೇರಿ ಕಾಂಗ್ರೆಸ್ ಪಕ್ಷದ ಉನ್ನತ ನಾಯಕರ ಸಮ್ಮುಖದಲ್ಲಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಯಿತು