ತೆಹ್ರಾನ್ : ಕಳೆದ ಅ.1ರಂದು 180 ಕ್ಷಿಪಣಿ ಬಳಸಿ ತನ್ನ ಮೇಲೆ ದಾಳಿ ನಡೆಸಿದ್ದಕ್ಕೆ ಪ್ರತೀಕಾರ ಕೈಗೊಳ್ಳಲು ಕಾಯುತ್ತಿದ್ದ ಇಸ್ರೇಲ್, ಶನಿವಾರ ಬೆಳ್ಳಂಬೆಳಗ್ಗೆ ಇರಾನ್‌ನ 20 ಆಯಕಟ್ಟಿನ ಪ್ರದೇಶಗಳ ಮೇಲೆ 100 ವಿಮಾನಗಳ ಮೂಲಕ 200 ಕ್ಷಿಪಣಿ ಬಳಸಿ ಭೀಕರ ನಿರ್ದೇಶಿತ ವೈಮಾನಿಕ ದಾಳಿ’ ನಡೆಸಿದೆ. ಅಮೆರಿಕ ನಿರ್ಮಿತ -35, – 151, -260 ಯುದ್ಧ ವಿಮಾನ ಬಳಸಿ 2000 ಕಿ.ಮೀ.ನಷ್ಟು ದೂರ ಸಾಗಿ ಇರಾನ್ ಸನಿಹವೇ ಬಂದು ಕ್ಷಿಪಣಿ ಗಳನ್ನು ಹಾರಿಸಿದೆ ಈ ದಾಳಿಯಲ್ಲಿ ಇಬ್ಬರು ಇರಾನ್ ಯೋಧರು ಬಲಿಯಾಗಿದ್ದಾರೆ
ಇರಾನ್‌ನ ಸೇನಾ ನೆಲೆಗಳು ಮತ್ತು ಕ್ಷಿಪಣಿ ಉತ್ಪಾದನಾ ಘಟಕಗಳನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ’ ಎಂದು ಇಸ್ರೇಲ್ ಹೇಳಿದೆ. ದಾಳಿಯಲ್ಲಿ ತನ್ನ ಇಬ್ಬರು ಯೋಧರು ಅಸುನೀಗಿದ್ದಾರೆ ಎಂದು ಇರಾನ್ ಹೇಳಿಕೆ ಬಿಡುಗಡೆ ಮಾಡಿದ್ದು, ಇದಕ್ಕೆ ತಕ್ಕ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಗುಡುಗಿದೆ.
ಇರಾನ್ ಪರಮಾಣು ಘಟಕಗಳು ಮತ್ತು ತೈಲ ಬಾವಿಗಳ ಮೇಲೆ ಇಸ್ರೇಲ್ ದಾಳಿ ನಡೆಸಬಹುದು ಎಂಬ ಆತಂಕ ಇತ್ತಾದರೂ ಸದ್ಯಕ್ಕೆ ಅಂಥ ದಾಳಿಯಿಂದ ಇಸ್ರೇಲ್ ದೂರವೇ ಉಳಿದಿದೆ. ಆದರೆ ಈ ದಾಳಿಯಿಂದ ಈಗಾಗಲೇ ಮಧ್ಯಪ್ರಾಚ್ಯದಲ್ಲಿ ನಿರ್ಮಾಣವಾಗಿರುವ ಉದ್ವಿಗ್ನ ಸ್ಥಿತಿಯನ್ನು ಇನ್ನಷ್ಟು ವಿಕೋಪಕ್ಕೆ ಹೋಗುವ ಎಲ್ಲಾ ಸಾಧ್ಯತೆಗಳೂ ಇವೆ.