ಮಾಸ್ಕೋ : ಉಕ್ರೇನ್ ಮೇಲೆ ರಷ್ಯಾ ಸಾರಿದ ಯುದ್ಧದಲ್ಲಿ ಮಕ್ಕಳು ಸೇರಿದಂತೆ ಅಮಾಯಕ ಜೀವಗಳ ಬಲಿಯಾಗಿರುವುದು ಅತ್ಯಂತ ಹೃದಯ ವಿದ್ರಾವಕ ಎಂಬುದಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ಗೆ ತಿಳಿಸಿರುವ ಪ್ರಧಾನಿ ನರೇಂದ್ರ ಮೋದಿಯವರು, ಬಾಂಬ್ ಗಳು, ಬಂದೂಕು ಮತ್ತು ಗುಂಡುಗಳ ನಡುವೆ ಶಾಂತಿ ಮಾತುಕತೆ ಯಶಸ್ವಿಯಾಗದು ಎಂದು ಅವರಿಗೆ ಹೇಳಿದ್ದಾರೆ.
ಹಿಂಸಾಚಾರದ ಮೂಲಕ ಸಂಘರ್ಷಗಳನ್ನು ಪರಿಹರಿಸುವುದು ವ್ಯರ್ಥ ಪ್ರಯತ್ನವೆನಿಸುತ್ತದೆ. ಇಂದು ಶಾಂತಿ ಅತ್ಯಂತ ಅಗತ್ಯವಾಗಿದ್ದು, ಹೊಸ ಪೀಳಿಗೆಯ ಉಜ್ವಲ ಭವಿಷ್ಯಕ್ಕಾಗಿ ಇದನ್ನು ನಾವು ಸಾಧಿಸಬೇಕಾಗಿದೆ ಎಂಬುದನ್ನು ಪುಟಿನ್‌ಗೆ ವಿವರಿಸಿದ್ದಾರೆ. ಇದಕ್ಕೂ ಮುನ್ನ ಅವರು ಪುಟಿನ್ ನಿಲುವನ್ನು ಆಲಿಸಿದ್ದು, ಅನಂತರ ಮೋದಿಯವರು ಶಾಂತಿ ಮತ್ತು ಸ್ಥಿರತೆ ಕುರಿತಂತೆ ಗ್ಲೋಬಲ್ ಸೌತ್‌ನ ನಿರೀಕ್ಷೆಗಳನ್ನೂ ಅವರ ಮುಂದಿಟ್ಟಿದ್ದಾರೆ. ಉಕ್ರೇನ್ ವಿರುದ್ಧದ ಯುದ್ದ ಇಲ್ಲವೇ ಭಯೋತ್ಪಾದಕ ದಾಳಿಗಳಲ್ಲಿ ಅಮಾಯಕರು ಅದರಲ್ಲೂ ಮಕ್ಕಳ ಸಾವು ಸಂಭವಿಸಿರುವುದು ಅತ್ಯಂತ ನೋವಿನ ಸಂಗತಿ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿಯವರು ರಷ್ಯಾದ ಅಧ್ಯಕ್ಷ ಪುಟಿನ್‌ಗೆ ತಿಳಿಸಿದ್ದಾರೆ. ರಷ್ಯಾವು ಕೀವ್‌ನ ಪ್ರಧಾನ ಮಕ್ಕಳ ಆಸ್ಪತ್ರೆ ಮೇಲೆ ಕ್ಷಿಪಣಿ ದಾಳಿಯಲ್ಲಿ ಅನೇಕ ಮಕ್ಕಳು ಮಡಿದಿರುವ ಹಿನ್ನೆಲೆಯಲ್ಲಿ ಮೋದಿಯವರ ಗಂಭೀರ ಹೇಳಿಕೆ ವ್ಯಕ್ತವಾಗಿದ್ದು, ಅಮಾಯಕ ಮಕ್ಕಳ ಹತ್ಯೆ, ಸಾವು ಹೃದಯ ಹಿಂಡುವಂಥದ್ದು ಎಂದಿದ್ದಾರೆ ಮೋದಿ
ಪ್ರಧಾನಿ ಮೋದಿಗೆ ರಷ್ಯಾದ ಅತ್ಯುನ್ನತ ನಾಗರಿಕ ಪುರಸ್ಕಾರ
ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಯಲ್ಲಿ ಅಸಾಧಾರಣ ಸೇವೆಗಾಗಿ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಮಾಸ್ಕೋದಲ್ಲಿ ಮಂಗಳವಾರ ಪ್ರಧಾನಿ ಮೋದಿ ಅವರಿಗೆ ರಷ್ಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿ ಆರ್ಡರ್ ಆಫ್ ಸೇಂಟ್ ಆಂಡ್ಯೂ ದಿ ಅಪೋಸಲ್‌ನ್ನು ಪ್ರದಾನ ಮಾಡಿದರು