ಕೀವ್ (ಉಕ್ರೇನ್) : ರಷ್ಯಾ-ಉಕ್ರೇನ್ ಯುದ್ಧದ ಆರಂಭದಿಂದ ಶಾಂತಿ ಸಂದೇಶ ಸಾರುತ್ತಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ, ಶುಕ್ರವಾರ ತಮ್ಮ ಮೊತ್ತಮೊದಲ ಉಕ್ರೇನ್ ಭೇಟಿಯ ವೇಳೆಯೂ ಇದೇ ಮಾತು ಪುನರುಚ್ಚರಿಸಿದ್ದಾರೆ. ‘ಶಾಂತಿ ಮಾತುಕತೆ ನಡೆಸಿ, ಯುದ್ದ ನಿಲ್ಲಿಸಿ’ ಎಂದು ಅವರು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಜೆಲೆನ್ ಸ್ಕಿ ಅವರಿಗೆ ಕರೆ ನೀಡಿದ್ದಾರೆ. ಅಲ್ಲದೆ, ತಮ್ಮ ರಷ್ಯಾ ಭೇಟಿ ವೇಳೆ ಅಲ್ಲಿನ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೂ ಇದೇ ಮಾತು ಹೇಳಿದ್ದಾಗಿ ತಿಳಿಸಿದ್ದಾರೆ
ಶುಕ್ರವಾರ ಬೆಳಗ್ಗೆ 1 ದಿನದ ಭೇಟಿಗೆ ಉಕ್ರೇನ್‌ಗೆ ಆಗಮಿಸಿದ ಪ್ರಧಾನಿ ಮೋದಿ ಇದು 1991ರಲ್ಲಿ ಉಕ್ರೇನ್ ಸ್ವಾತಂತ್ರ್ಯ ಪಡೆದ ನಂತರ ಭಾರತದ ಪ್ರಧಾನಿಯ ಮೊತ್ತಮೊದಲ ಭೇಟಿ ಅಧ್ಯಕ್ಷ ಜೆಲೆನ್‌ಸ್ಕಿ ಜತೆ ಮಹತ್ವದ ಮಾತುಕತೆ ನಡೆಸಿದರು. ಈ ವೇಳೆ ಹಿಂದಿಯಲ್ಲೇ ಮಾತನಾಡಿದ ಅವರು, ‘ಯುದ್ಧ ಬೇಡ, ಶಾಂತಿ ಮಾರ್ಗದ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ. ಇದಕ್ಕಾಗಿ ನಾನು ಎಲ್ಲ ನೆರವು ನೀಡಲು ಸಿದ್ಧ’ ಎಂದು ಕಳಕಳಿಯ ಮನವಿ ಮಾಡಿದರು