ಹೊಸದಿಲ್ಲಿ: ಭಯೋತ್ಪಾದನೆ ನಿಗ್ರಹಕ್ಕಿರುವ ವ್ಯವಸ್ಥೆ ಹಾಗೂ ಸಾಮರ್ಥ್ಯಗಳನ್ನು ಸಂಪೂರ್ಣವಾಗಿ ಬಳಸಿ, ಭಯೋತ್ಪಾದಕರ ಅಟ್ಟಹಾಸವನ್ನು ನಿರ್ದಾಕ್ಷಿಣ್ಯವಾಗಿ ಮಟ್ಟಹಾಕುವಂತೆ ಪ್ರಧಾನಿ ನರೇಂದ್ರ ಮೋದಿ ಭದ್ರತಾ ಪಡೆಯ ಉನ್ನತಾಧಿಕಾರಿಗಳಿಗೆ ಆದೇಶಿಸಿದ್ದಾರೆ.
ಲಭ್ಯವಿರುವ ಎಲ್ಲಾ ಸಂಪನ್ಮೂಲಗಳು ಮತ್ತು ಉಪಕ್ರಮಗಳನ್ನು ಇದಕ್ಕಾಗಿ ಬಳಸಿಕೊಳ್ಳುವಂತೆ ನಿರ್ದೇಶಿಸುವ ಮೂಲಕ, ಸಂಭಾವ್ಯ ಯಾವುದೇ ಉಗ್ರ ಬೆದರಿಕೆಗಳನ್ನು ಉಕ್ಕಿನ ಹಸ್ತಗಳಿಂದ ಮಣ್ಣುಗೂಡಿಸುವ ಅಗತ್ಯವನ್ನು ಪ್ರಧಾನಿ ಮೋದಿ ಪ್ರತಿಪಾದಿಸಿದ್ದಾರೆ.
ಕಳೆದ ಕೆಲವು ದಿನಗಳಲ್ಲಿ ಜಮ್ಮು ಕಾಶ್ಮೀರದ ನಾಲ್ಕು ಕಡೆ ಭಯೋತ್ಪಾದಕ ದಾಳಿ ನಡೆದಿರುವ ಹಿನ್ನೆಲೆಯಲ್ಲಿ ಕಣಿವೆ ರಾಜ್ಯದ ಭದ್ರತಾ ಸನ್ನದ್ಧತೆಗಳ ಪರಾಮರ್ಶೆಗಾಗಿ ನಡೆದ ಸಭೆಯ ಅಧ್ಯಕ್ಷತೆಯನ್ನು ಪ್ರಧಾನಿ ಮೋದಿ ವಹಿಸಿದ್ದರು. ವಲಯದಲ್ಲಿನ ಪ್ರಸಕ್ತ ಭದ್ರತಾ ಸನ್ನಿವೇಶ ಬಗ್ಗೆ ರಾಷ್ಟ್ರೀಯ ರಕ್ಷಣಾ ಸಲಹೆಗಾರ ಅಜಿತ್ ದೋವಲ್ ಪ್ರಧಾನಿಯವರಿಗೆ ಸಮಗ್ರ ಮಾಹಿತಿ ನೀಡಿದರು
50 ಶಂಕಿತರ ಸೆರೆ
ಶ್ರೀನಗರ : ಜಮ್ಮು-ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ ಮೇಲೆ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿ ಸಂಬಂಧ ಪೊಲೀಸರು 50 ಶಂಕಿತರನ್ನು ವಶಕ್ಕೆ ಪಡೆದಿದ್ದಾರೆ. ಘಟನೆ ಯ ಬಳಿಕ ಪೊಲೀಸರು ಮತ್ತು ಭದ್ರತಾ ಪಡೆಗಳು ವ್ಯಾಪಕ ತನಿಖೆ ನಡೆಸಿವೆ. ದಾಳಿಯನ್ನು ಸಂಘಟಿಸುವಲ್ಲಿ ತೊಡಗಿಸಿಕೊಂಡವರನ್ನು ಸೆರೆ ಹಿಡಿಯಲಾಗಿದೆ. ಸಮಗ್ರ ತನಿಖೆ ನಡೆಸಿದ್ದು, ಅರ್ನಾಸ್ ಮತ್ತು ಮಹೋರ್‌ನ ದೂರದ ಪ್ರದೇಶಗಳಲ್ಲಿ ಶೋಧ ಕಾರ್ಯ ನಡೆಸಲಾಯಿತು. ಈ ಪ್ರದೇಶಗಳು 1995 ಮತ್ತು 2005 ರ ನಡುವೆ ಭಯೋ ತ್ಪಾದಕ ತಾಣಗಳಾಗಿದ್ದವು ಎಂದು ಅಧಿಕಾರಿಗಳು ಹೇಳಿದರು