ನವದೆಹಲಿ : 26 ಪ್ರವಾಸಿಗರ ಬಲಿ ಪಡೆದ ಜಮ್ಮು-ಕಾಶ್ಮೀರದ ಪಹಲ್ಗಾಂ ನರಮೇಧ ಪ್ರಕರಣದಲ್ಲಿ ಯಾವುದೇ ನಿರ್ಧಾರಕೈಗೊಳ್ಳುವ ಪೂರ್ಣ ಅಧಿಕಾರವನ್ನು ಭಾರತೀಯ ಸೇನೆಗೆ ನೀಡುವ ಮಹತ್ವದ ನಿರ್ಧಾರವನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಇಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಯಾರ ವಿರುದ್ಧ? ಹೇಗೆ ? ಯಾವ ರೀತಿ ದಾಳಿ ನಡೆಸಬೇಕು ಎಂಬುದನ್ನು ನೀವೇ ನಿರ್ಧರಿಸಿ ಎಂದು ಸೇನೆಗೆ ಪೂರ್ಣ ಅಧಿಕಾರ ನೀಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ.
‘ಪಹಲ್ಲಾಂ ದಾಳಿ ರೂವಾರಿಗಳಿಗೆ ಊಹಿಸಲಾಗದ ರೀತಿಯಲ್ಲಿ ತಕ್ಕ ಶಿಕ್ಷೆ ನೀಡಲಾಗುವುದು ಎಂದು ಇತ್ತೀಚೆಗೆ ಮೋದಿ ಗುಡುಗಿದ್ದರು. ಬಳಿಕ, ಭಾರತ ನಮ್ಮ ಮೇಲೆ ದಾಳಿ ನಡೆಸುವುದು ಬಹುತೇಕ ಖಚಿತ. ಅದನ್ನು ತಡೆಯಲು ಸಾಧ್ಯವೇ ಇಲ್ಲ ಎಂದು ಸ್ವತಃ ಪಾಕಿಸ್ತಾನದ ರಕ್ಷಣಾ ಸಚಿವ ಸ್ವಾಜಾ ಆಸೀಫ್ ಹೇಳಿದ್ದರು. ಇದರ ಬೆನ್ನಲ್ಲೇ ಭಾರತ ಸರ್ಕಾರ ಇಂಥದ್ದೊಂದು ಮಹತ್ವದ ದಿಟ್ಟ ಹೆಜ್ಜೆ ಇರಿಸಿದೆ.
ಪೂರ್ಣ ಅಧಿಕಾರ :
ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಸಶಸ್ತ್ರ ಪಡೆಗಳ ಮುಖ್ಯಸ್ಥ ಅನಿಲ್ ಚೌಹಾಣ್ ಸೇರಿದಂತೆ ಮೂರು ಸೇನೆಗಳ ಮುಖ್ಯಸ್ಥರು ಭಾಗವಹಿಸಿದ್ದರು.

