ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾದ ಆಕರ್ಷಣೆಯಾದ ‘ಜಂಬೂಸವಾರಿ’ ಮಳೆ ನಡುವೆಯೂ ಶನಿವಾರ ಅದ್ದೂರಿಯಾಗಿ ನಡೆಯಿತು. ಮಳೆ ಕಣ್ಣಾಮುಚ್ಚಾಲೆ ನಡುವೆಯೂ ಮೆರವಣಿಗೆಯನ್ನು ಜನ ಕಣ್ಣುಂಬಿ ಕೊಂಡರು. ಸಂಜೆ ಬನ್ನಿಮಂಟಪದಲ್ಲಿ ಚಿತ್ತಾಕರ್ಷಕ ಪಂಜಿನ ಕವಾಯತು ನಡೆಯಿತು. ರಾಜ್ಯಪಾಲ ಥಾವರ್‌ಚಂದ್ ಗೆಹೋತ್ ಗೌರವ ವಂದನೆ ಸ್ವೀಕರಿಸಿದರು. ಇದರೊಂದಿಗೆ ಕಳೆದ ಹತ್ತು ದಿನಗಳಿಂದ ನಡೆಯುತ್ತಿದ್ದ ದಸರಾಗೆ ತೆರೆ ಬಿತ್ತು
ಇದಕ್ಕೂ ಮೊದಲು, ಮಧ್ಯಾಹ್ನ 1.41 ರಿಂದ 2.10 ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅರಮನೆಯ ಉತ್ತರದಲ್ಲಿರುವ ‘ಬಲರಾಮ”ದ್ವಾರದಲ್ಲಿ ನಂದಿಧ್ವಜ ಪೂಜೆ ನೆರವೇರಿಸಿದರು. ಅಲ್ಲಿಂದ ಸಿಎಂ, ಡಿಸಿಎಂ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್. ಸಿ. ಮಹದೇವಪ್ಪ ಮೊದಲಾದವರು ತೆರೆದ ಜೀಪಿನಲ್ಲಿ ಅರಮನೆ ಆವರಣಕ್ಕೆ ಆಗಮಿಸಿದರು.