ವಾಷಿಂಗ್ಟನ್ : ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಇಂದು ಸೋಮವಾರ (ಜ. 20) ಮಧ್ಯಾಹ್ನ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅಮೆರಿಕದ ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ಅವರ ಸಮ್ಮುಖದಲ್ಲಿ ಅಧ್ಯಕ್ಷೀಯ ಪ್ರಮಾಣ ವಚನ ನಡೆಯಲಿದೆ. ಆರ್ಕ್ ಟಿಕ್ ಸ್ಫೋಟದಿಂದಾಗಿ ಸಮಾರಂಭವು ಒಳಾಂಗಣದಲ್ಲಿ ನಡೆಯುತ್ತಿದೆ. ಬೆಳಗಿನ ಪ್ರಾರ್ಥನೆ ಸೇಂಟ್ ಜಾನ್ಸ್ ಎಪಿಸ್ಕೋಪಲ್ ಚರ್ಚ್ ನಲ್ಲಿ ನಡೆಯಲಿದೆ. ಬಳಿಕ, ಟ್ರಂಪ್ ಮತ್ತು ಅವರ ಪತ್ನಿ ಮೆಲಾನಿಯಾ ಟ್ರಂಪ್ ಮತ್ತು ನಿರ್ಗಮಿಸುವ ಅಧ್ಯಕ್ಷ ಜೋ ಬಿಡೆನ್ ಮತ್ತು ಪ್ರಥಮ ಮಹಿಳೆ ನಡುವೆ ಶ್ವೇತಭವನದಲ್ಲಿ ಚಹಾ ಕೂಟ ನಡೆಯಲಿದೆ. ನಂತರ, ಟ್ರಂಪ್ ಮಧ್ಯಾಹ್ನ ಯುಎಸ್ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಯಾರಿಗೆಲ್ಲಾ ಆಹ್ವಾನ:
ಟ್ರಂಪ್ ಅವರ ಪ್ರಮುಖ ಬೆಂಬಲಿಗರಾದ ಅರ್ಜೆಂಟೀನಾ ಅಧ್ಯಕ್ಷ ಜೇವಿಯರ್ ಮಿಲೀ, ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಭದ್ರತೆಯ ದೃಷ್ಟಿಯಿಂದ ಹೆಚ್ಚಿನ ದೇಶಗಳ ನಾಯಕರು ತಮ್ಮ ಪ್ರತಿನಿಧಿಗಳನ್ನು ಕಳಿಸುತ್ತಿದ್ದಾರೆ. ಟ್ರಂಪ್ ಅವರ ಸಲಹೆಗಾರ ಮತ್ತು ಟೆಸ್ಲಾ ಮತ್ತು ಸ್ಪೇಸ್ ಎಕ್ಸ್ನ ಸಿಇಒ ಎಲಾನ್ ಮಸ್ಕ್ ಮತ್ತು ಅಮೆಜಾನ್ ಕಾರ್ಯನಿರ್ವಾಹಕ ಅಧ್ಯಕ್ಷ ಮತ್ತು ಸಿಇಒ ಜೆಫ್ ಬೆಜೋಸ್, ಮೆಟಾ ಸಿಇಒ ಮಾರ್ಕ್ ಜುಕರ್ಬರ್ಗ್ ತಮ್ಮ ಉಪಸ್ಥಿತಿಯನ್ನು ದೃಢಪಡಿಸಿದ್ದಾರೆ.