ಹೊಸದಿಲ್ಲಿ : ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್ಎಸ್) ಚಾರಿತ್ರಿಕ ಭೇಟಿ ನಂತರದಲ್ಲಿ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಭಾನುವಾರ ಭಾರತಕ್ಕೆ ಮರಳುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ತಮ್ಮ ಅನುಭವ ಹಂಚಿಕೊಳ್ಳಲಿರುವ ಶುಭಾಂಶು ಶುಕ್ಲಾ, ಭಾರತದಲ್ಲಿನ ತನ್ನ ಸ್ನೇಹಿತರು, ಸಹೋದ್ಯೋಗಿಗಳ ಜತೆಗೂ ಅನುಭವ ಹಂಚಿಕೊಳ್ಳಲು ಕಾತರರಾಗಿದ್ದಾರೆ. ಇದೇ ವೇಳೆ ಇಸ್ರೋ 2027ರ ವೇಳೆ ತನ್ನ ಚೊಚ್ಚಲ ಮಾನವ ಸಹಿತ ಬಾಹ್ಯಾಕಾಶಯಾನಕ್ಕೆ ಸಿದ್ಧತೆಯಲ್ಲಿ ತೊಡಗಿದೆ.
ಐಎಸ್‌ಎಸ್‌ಗೆ ಆಕ್ಸಿಯಮ್-4 ಮಿಷನ್ ಬಗ್ಗೆ ತರಬೇತಿ ಪಡೆಯಲು ಕಳೆದೊಂದು ವರ್ಷದಿಂದ ಅಮೆರಿಕದಲ್ಲಿದ್ದ ಶುಕ್ಲಾ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ನಂತರ ಹುಟ್ಟೂರು ಲಖನೌಗೆ ತೆರಳುವರು. ನಂತರ ಆ.22-23ರಂದು ನಡೆಯುವ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ದಿಲ್ಲಿಗೆ ಮರಳುವ ಸಾಧ್ಯತೆಗಳಿವೆ.
ಅಮೆರಿಕದಿಂದ ಹೊರಡುವಾಗ ತನಗೆ ಮಿಶ್ರ ಭಾವನೆಗಳು ಕಾಡಿದ್ದವು. ಹಾಗೆಂದು ತನ್ನ ಅನುಭವಗಳನ್ನು ತನ್ನವರ ಜತೆ ಹಂಚಿಕೊಳ್ಳಲು ಕಾತರನಿರುವ ಕಾರಣ, ಭಾರತಕ್ಕೆ ಮರಳುವುದನ್ನು ವಿಳಂಬಿಸಲಾರೆ. ಭಾರತಕ್ಕೆ ಹೊರಡಲು ವಿಮಾನದಲ್ಲಿ ಕುಳಿತಾಗ ನನ್ನ ಹೃದಯವನ್ನು ಸಮ್ಮಿಶ್ರ ಭಾವನೆಗಳು ಕಾಡಿಬಿಟ್ಟವು. ವಿಮಾನದಲ್ಲಿ ಕುಳಿತ ಫೋಟೋವನ್ನು ಇನ್‌ಸ್ಟಾಗ್ರಾಮ್‌ಗೆ ಪೋಸ್ಟ್ ಮಾಡಿರುವ ಶುಕ್ಲಾ ಮೇಲಿನಂತೆ ಕ್ಯಾಪ್ಸನ್ ಬರೆದಿದ್ದಾರೆ.

