ನವದೆಹಲಿ: ಚುನಾವಣೆ ಗೆಲ್ಲುವ ಸಲುವಾಗಿ ರಾಜ್ಯಗಳಲ್ಲಿ ಜಾರಿಗೆ ತರಲಾಗುತ್ತಿರುವ ಉಚಿತ ಬಸ್ ಪ್ರಯಾಣದ ಯೋಜನೆಗಳು ಪ್ರಗತಿಗೆ ಮಾರಕ. ಅದರಿಂದ ಆರ್ಥಿಕ ಪ್ರಗತಿ ಕುಂಠಿತವಾಗುತ್ತದೆ. ಇಂಥ ಯೋಜನೆಗಳು ಅಡ್ಡ ಪರಿಣಾಮಗಳನ್ನು ಹೊಂದಿರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಎಚ್ಚರಿಸಿದ್ದಾರೆ. ತೆಲಂಗಾಣದ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಘೋಷಿಸಿದ ಬಳಿಕ ಹೈದರಾಬಾದ್ ಮೆಟ್ರೋದಲ್ಲಿ ಪ್ರಯಾಣಿಕರ ಸಂಖ್ಯೆ ಭಾರೀ ಇಳಿಕೆಯಾಗಿರುವ ವರದಿಗಳ ಬೆನ್ನಲ್ಲೇ ಟೀವಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಮೋದಿ ಈ ಹೇಳಿಕೆ ನೀಡಿದ್ದಾರೆ. ದೀರ್ಘಕಾಲೀನ ಚುನಾವಣಾ ಪ್ರಚಾರದುದ್ದಕ್ಕೂ ಉಚಿತ ಯೋಜನೆಗಳ ವಿರುದ್ಧ ಮೋದಿ ಆಕ್ರೋಶ ವ್ಯಕ್ತಪಡಿಸುತ್ತಾ ಬಂದಿದ್ದರೂ, ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ಯೋಜನೆ ವಿರುದ್ಧ ನಿರ್ದಿಷ್ಟವಾಗಿ ಅವರು ಎಲ್ಲೂ ಮಾತನಾಡಿರಲಿಲ್ಲ