ನವದೆಹಲಿ : ಮಹಿಳೆಯರನ್ನು ಗುರಿಯಾಗಿಸಿ ಎಸಗುವ ಅಪರಾಧಗಳನ್ನು ರಾಜ್ಯ ಸರ್ಕಾರಗಳು ತ್ವರಿತವಾಗಿ ಬಗೆಹರಿಸಬೇಕು ಎಂದು ಕರೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಸ್ತ್ರೀಯರ ಮೇಲೆ ದೌರ್ಜನ್ಯ ಎಸಗುವವರಲ್ಲಿ ನಡುಕ ಹುಟ್ಟಿಸುವಂತೆ ಕ್ರಮ ಕೈಗೊಳ್ಳಿ ಎಂದು ಸೂಚಿಸಿದ್ದಾರೆ.
ಕೋಲ್ಕತಾದಲ್ಲಿ ಇತ್ತೀಚೆಗೆ ವೈದ್ಯೆಯೊಬ್ಬರ ಮೇಲೆ ನಡೆದ ಭೀಕರ ಅತ್ಯಾಚಾರ ಹಾಗೂ ಕೊಲೆ ಘಟನೆಯನ್ನು ಸ್ವಾತಂತ್ರೋತ್ಸವ ಭಾಷಣದಲ್ಲಿ ಪರೋಕ್ಷವಾಗಿ ಪ್ರಸ್ತಾಪಿಸಿದ ಅವರು, ‘ಮಹಿಳೆಯರ ವಿರುದ್ಧದ ಅಪರಾಧಗಳನ್ನು ತ್ವರಿತವಾಗಿ ತನಿಖೆಗೆ ಒಳಪಡಿಸಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು. ಸ್ತ್ರೀಯರ ಮೇಲೆ ದೌರ್ಜನ್ಯ ಎಸಗುವವರಿಗೆ ನಡುಕ ಹುಟ್ಟಿಸಬೇಕು. ನಾನಿಂದು ಕೆಂಪುಕೋಟೆಯ ಮೇಲೆ ನಿಂತು ನೋವು ವ್ಯಕ್ತಪಡಿಸುತ್ತಿದ್ದೇನೆ. ನಮ್ಮತಾಯಿ, ಅಕ್ಕ-ತಂಗಿಯರು ಹಾಗೂ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ನಾವು ಗಂಭೀರವಾಗಿ ಯೋಚಿಸಬೇಕಿದೆ. ಈ ವಿಷಯದಲ್ಲಿ ಜನಸಾಮಾನ್ಯರಲ್ಲಿ ಆಕ್ರೋಶ ಮನೆಮಾಡಿದೆ. ನನಗದು ತಿಳಿಯುತ್ತದೆ’ ಎಂದು ಹೇಳಿದರು.
‘ಇಂತಹ ಕೃತ್ಯ ಎಸಗುವವರಿಗೆ ತಾವು ಗಲ್ಲಿಗೇರುತ್ತೇವೆ ಎಂಬುದು ಗೊತ್ತಾಗಬೇಕು. ಅವರ ವಿರುದ್ಧ ಯಾವುದೇ ವಿಳಂಬ ಮಾಡದೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮೋದಿ ಹೇಳಿದರು