ನವದೆಹಲಿ : ಕಳೆದೊಂದು ವಾರದಿಂದ ದೇಶದ ವಿಮಾನ ಯಾನ ಕಂಪನಿಗಳಿಗೆ ನಿರಂತರವಾಗಿ ಸುಮಾರು 250 ಹುಸಿ ಬಾಂಬ್ ಬೆದರಿಕೆಗಳು: ಬರುತ್ತಿರುವುದನ್ನು ಗಂಭೀರ ಪರಿಗಣಿಸಿರುವ ಪ್ರಧಾನಿ ನರೇಂದ್ರ ಮೋದಿ, ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ಮೂಲಗಳ ಪ್ರಕಾರ, ಪ್ರಧಾನಿ ಮೋದಿ ಅವರು ಸಂಬಂಧಪಟ್ಟ ಎಲ್ಲಾ ಇಲಾಖೆ, ಸಚಿವಾಲಯಗಳು ಹಾಗೂ ತನಿಖಾ ಏಜೆನ್ಸಿಗಳು ಒಟ್ಟಾಗಿ ಈ ಸಮಸ್ಯೆ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ. ಗುರುವಾರ ನಡೆದ ಸಂಪುಟ ಸಭೆಯಲ್ಲಿ ಮೋದಿ ಈ ಸೂಚನೆಗಳನ್ನು ನೀಡಿದರು ಎಂದು ಮೂಲಗಳು ಹೇಳಿವೆ.
ಅನೇಕ ಹುಸಿ ಬಾಂಬ್ ಸಂದೇಶಗಳ ಮೂಲವನ್ನು ಕೇಂದ್ರ ಸರ್ಕಾರ ಈಗಾಗಲೇ ಪತ್ತೆಹಚ್ಚಿದ್ದು, ಕ್ರಮ ಕೈಗೊಳ್ಳುತ್ತಿದೆ ಎಂದು ಮೂಲಗಳು ತಿಳಿಸಿವೆ.ಎಲೆಕ್ಟ್ರಾನಿಕ್ ಸಚಿವಾಲಯ ಕೂಡ ಬುಧವಾರ ಮೆಟಾ ಮತ್ತು ಎಕ್ಸ್ ಸೋಷಿಯಲ್ ಮೀಡಿಯಾ ಕಂಪನಿಗಳ ಜೊತೆ ಸಭೆ ನಡೆಸಿ, ‘ನಿಮ್ಮ ಮೀಡಿಯಾ ಬಳಸಿಕೊಂಡು ರವಾನೆಯಾಗುತ್ತಿರುವ ಹುಸಿ ಬಾಂಬ್ ಸಂದೇಶ ತಡೆಗೆ ಏನು ಕ್ರಮ ಕೈಗೊಂಡಿದ್ದೀರಿ’ ಎಂದು ತರಾಟೆ ತೆಗೆದುಕೊಂಡಿತ್ತು. ಇದರ ಬೆನ್ನಲ್ಲೇ ಪ್ರಧಾನಿ ಮೋದಿ ಕೂಡ ಮಧ್ಯ ಪ್ರವೇಶಮಾಡಿ, ಬಾಂಬ್ ಬೆದರಿಕೆ ಸಂದೇಶಗಳ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ ನೀಡಿದ್ದಾರೆ.