ನವದೆಹಲಿ :’ನಾವು ಒಗ್ಗಟ್ಟಾಗಿದ್ದರೆ ಸುರಕ್ಷಿತವಾಗಿರುತ್ತೇವೆ (ಏಕ್ ಹೈ ತೊ ಸೇಫ್ ಹೈ) ಎಂಬುದು ಇಂದು ದೇಶದ ಮಹಾಮಂತ್ರವಾಗಿದೆ. ಹರ್ಯಾಣದ ಬಳಿಕ ಮಹಾರಾಷ್ಟ್ರ ಇದನ್ನು ಸಾಬೀತು ಪಡಿಸಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಬಿಜೆಪಿ ಒಳಗೊಂಡ ಮಹಾಯುತಿ ಕೂಟ ಜಯಭೇರಿ ಬಾರಿಸಿದ ಬೆನ್ನಲ್ಲೇ ಪಕ್ಷದ ಪ್ರಧಾನ ‘ಕಚೇರಿಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಮೋದಿ, ಕಳೆದ 50 ವರ್ಷಗಳಲ್ಲಿ ಚುನಾವಣಾ ಪೂರ್ವ ಮೈತ್ರಿ ಇದೇ ಮೊದಲ ಬಾರಿ ಇಂತಹ ಅಭೂತಪೂರ್ವ ಗೆಲುವು ಸಾಧಿಸುವ ಮೂಲಕ ಎಲ್ಲಾ ದಾಖಲೆಗಳನ್ನು ಮುರಿದಿದೆ. ಬಿಜೆಪಿಗೆ ಸತತ 3ನೇ ಬಾರಿ ಜನಾದೇಶ ನೀಡಿದ 6ನೇ ರಾಜ್ಯ ಮಹಾರಾಷ್ಟವಾಗಿದೆ. ಇಂದು ರಾಜ್ಯದಲ್ಲಿ ಉತ್ತಮ ಆಡಳಿತ, ನಿಜವಾದ ಸಾಮಾಜಿಕ ನ್ಯಾಯ ಜಯಿಸಿದೆ ಹಾಗೂ ಸುಳ್ಳು, ವಂಚನೆ ಹೀನಾಯವಾಗಿ ಸೋತಿದೆ’ ಎಂದು ಸಂತಸ ವ್ಯಕ್ತಪಡಿಸಿದರು
ಈ ವೇಳೆ ವಿಪಕ್ಷವಾದ ಇಂಡಿಯಾ ಕೂಟವನ್ನು ಕಟುವಾಗಿ ಟೀಕಿಸಿರುವ ಅವರು, ‘ಜನ ‘ದೇಶ ಮೊದಲು’ ಎನ್ನುವವರೊಂದಿಗೆ ಇದ್ದಾರೆ ಹೊರತು ‘ಕುರ್ಚಿ ಮೊದಲು’ ಎನ್ನುವವರೊಂದಿಗೆ ಅಲ್ಲ ಆದರೆ ಇದನ್ನು ಅರ್ಥೈಸಿಕೊಳ್ಳುವಲ್ಲಿ ಇಂಡಿಯಾ ಕೂಟ ಸೋತಿದೆ. ಇಂದು ಕಾಂಗ್ರೆಸ್ ಪರಾವಲಂಬಿಯಾಗಿದ್ದು ಸ್ವಂತ ಬಲದಲ್ಲಿ ಸರ್ಕಾರ ರಚಿಸಲು ಅಶಕ್ತವಾಗಿದೆ. ಕಾರಣ ಹಿಂದಿನ ಕಾಂಗ್ರೆಸ್ ಈಗ ಉಳಿದಿಲ್ಲ. ‘ರಾಜ ಪರಿವಾರ’ಕ್ಕೆ ಮಾತ್ರವೇ ಕಾಂಗ್ರೆಸ್ ಅನ್ನು ಮುನ್ನಡೆಸಲು ಅವಕಾಶವಿದೆಯೇ. ಹೊರತು, ಸಮರ್ಪಿತ ಕಾರ್ಯಕರ್ತರಿಗೂ ಮುಂದೆ ಬರಲಾಗದಂತಹ ವಾತಾವರಣವನ್ನು ಪಕ್ಷದಲ್ಲಿ ಸೃಷ್ಟಿಸಲಾಗಿದೆ. ಕಾಂಗ್ರೆಸ್ ಅಧಿಕಾರದ ಆಸೆಯಿಂದ ಜಾತಿಯ ವಿಷ ಹರಡುತ್ತಿದೆ. ಅದಕ್ಕೆ ತನ್ನ ಪರಿವಾರ ಮುಖ್ಯವೇ ಹೊರತು ಜನರಲ್ಲ ಎಂದರು.
ರಾಹುಲ್ಗೆ ಚಾಟಿ :
ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರಾಹುಲ್ ಗಾಂಧಿಯವರಮೇಲೆಪರೋಕ್ಷವಾಗಿ ವಾಗ್ದಾಳಿ ನಡೆಸಿ, ‘ಆ ಪಕ್ಷವು ಉತ್ತರಕ್ಕೆ ಹೋದಾಗ ದಕ್ಷಿಣಕ್ಕೆ ಅವಮಾನ ಮಾಡುತ್ತದೆ ಹಾಗೂ ದಕ್ಷಿಣಕ್ಕೆ ಹೋದಾಗ ಉತ್ತರಕ್ಕೆ ಅವಮಾನ ಮಾಡುತ್ತದೆ. ಸಾಲದೆಂಬಂತೆ ವಿದೇಶದಲ್ಲಿ ಭಾರತವನ್ನೇ ಅವಮಾನಿಸುತ್ತದೆ’ ಎಂದರು.